ಮಡಿಕೇರಿ ಜು.13 : ಪುತ್ತೂರಿನ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಡೆದ ರಾಜ್ಯ ಮಟ್ಟದ ಕಾವ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಚಲನಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ಪಾಲ್ಗೊಂಡು ಕವನ ವಾಚಿಸಿ ಗಮನ ಸೆಳೆದರು.
ಬೆಂಗಳೂರಿನ ಚಾಮರಾಜಪೇಟೆ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಎಂಪವರ್ಡ್ ಮೈಂಡ್ಸ್ ಎಡು ಸೆಲ್ಯೂಷನ್ಸ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಮೂರ್ತಿ ಉದ್ಘಾಟಿಸಿದರು.
ಕವಿಗಳು ಮತ್ತು ಚಿಂತಕರಾದ ಹೆಚ್.ಬಿ. ಯೂಸಫ್ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರೆ, ತುಮಕೂರು ಮಾತೃಭೂಮಿ ಸೇವಾ ಟ್ರಸ್ಟ್ ಸಂಸ್ಥಾಪಕ ಜ್ಯೋತಿ ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಎನ್. ಮೊಹಮ್ಮದ್ ಹುಮಾಯೂನ್ ವಹಿಸಿದ್ದರು. ವಿಮರ್ಶಕರು ಹಾಗೂ ಉಪನ್ಯಾಸಕರಾದ ವೈ.ಜೆ.ಮೈಜೂಬಸಾಹೇಬ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್‍ನ ರಾಜ್ಯಾಧ್ಯಕ್ಷ ಡಾ.ಎಂ.ಎಂ.ಭಾಷ ನಂದಿ, ದಾಸನಪುರ ಎನ್.ಆರ್.ಪಾಳ್ಯದ ಬ್ಲೂಮೂನ್ ಪಬ್ಲಿಕ್ ಶಾಲೆಉ ಕಾರ್ಯದರ್ಶಿ ಸಿ.ಎನ್.ಚಂದ್ರಶೇರ್, ವಿಶ್ವ ಕನ್ನಡ ಕಲಾಕೂಟದ ಅಧ್ಯಕ್ಷ ಬಿ.ಎನ್.ಸುರೇಶ್ ಬಾಬು, ಬಾದಾಮಿ ಶಿಕ್ಷಕರಾದ ರಮೇಶ್ ಹಂಜಿ, ಲೇಖಕಿ ಹಾಗೂ ಶಿಕ್ಷಕಿ ಅಶ್ವಿನಿ ಎಸ್.ಅಂಗಡಿ, ಕವಯಿತ್ರಿ ಆಶಾ ಶಿವು, ಸಾಮಾಜಿಕ ಚಿಂತಕ ಮಂಜಪ್ಪ ಟಿ., ಖಿದ್ಮಾ ಫೌಂಡೇಶನ್ ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು, ಕಾರ್ಯದರ್ಶಿ ಅಮೀತಾ ಅಶೋಕ್ ಪ್ರಸಾದ್ ಹಾಜರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸೇವಾ ರತ್ನ ಪ್ರಶಸ್ತಿ, ಖಿದ್ಮಾ ಶಿಕ್ಷಕರತ್ನ ಪ್ರಶಸ್ತಿ ಹಾಗೂ ಖಿದ್ಮಾ ಕಾವ್ಯಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇದೇ ಸಂದರ್ಭ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮೂವತ್ತು ಸಾಹಿತಿಗಳು ಕವನ ವಾಚಿಸಿದರು. ಕವಯಿತ್ರಿ ಈರಮಂಡ ಹರಿಣಿ ವಿಜಯ್ ಅವರು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ “ಉಸಿರಾಗಲಿ ಕನ್ನಡ” ಕವನ ವನ್ನು ವಾಚಿಸಿ ಎಲ್ಲರ ಮೆಚ್ಚುಗೆ ಪಡೆದರು. ಇವರನ್ನು ಖಿದ್ಮಾ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಸಿ.ಐ.ಪೂಜಾ ನಿರೂಪಿಸಿ, ಜಿ.ಜ್ಯೋತಿ ವಂದಿಸಿದರು.