ಮಡಿಕೇರಿ ಜು.14 : ಸರ್ಕಾರದ ಆದೇಶದಂತೆ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 05 ಕೆ.ಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 05 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ 2023 ರ ಜುಲೈ ಮಾಹೆಯಿಂದ ಪ್ರತಿ ಕೆ.ಜಿ ಗೆ ರೂ.34 ರಂತೆ (34*5 ಕೆ.ಜಿ=170) 170 ರೂ.ಗಳನ್ನು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಅಂತ್ಯೋದಯ ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳ ಪಡಿತರ ಚೀಟಿಗೆ ಈಗಾಗಲೇ 35 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ನೀಡುತ್ತಿರುವುದರಿಂದ ಅಂತಹ ಅಂತ್ಯೋದಯ ಪಡಿತರ ಚೀಟಿಗಳಿಗೆ ನೇರ ನಗದು ವರ್ಗಾವಣೆ ಸೌಲಭ್ಯ ಒಳಪಡುವುದಿಲ್ಲ. ಉಳಿದಂತೆ 4 ಸದಸ್ಯರಿದ್ದರೆ ಈ ಕುಟುಂಬವು ರೂ. 170 (34x5x1) ಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬವು ರೂ. 510/- (34x5x3) ಗಳನ್ನು ಅಥವಾ 6 ಸದಸ್ಯರನ್ನು ಹೊಂದಿರುವ ಕುಟುಂಬವು ರೂ.850 (34x5x5) ಗಳನ್ನು ಪಡೆಯುತ್ತದೆ. ಇದಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತವು ಮುಂದುವರೆಯುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಕುಟುಂಬಗಳು ನೇರ ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಕಳೆದ ಮೂರು ತಿಂಗಳುಗಳಲ್ಲಿ ಪಡಿತರ ಆಹಾರ ದಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ.
ಡಿ.ಬಿ.ಟಿ ಮುಖಾಂತರ ಪಡಿತರ ಚೀಟಿ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡುವ ಯೋಜನೆ ಸಂಬಂಧ ಒಟ್ಟು 12,930 ಡಿ.ಬಿ.ಟಿ ಫಲಾನುಭವಿಗಳ ಬ್ಯಾಂಕ್ ಖಾತೆಯು Inactive/ Not available in DB ಸ್ಥಿತಿಯಲ್ಲಿದ್ದು, ಇಂತಹ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರದರ್ಶಿಸಲಾಗಿದೆ. ಈ ಪಟ್ಟಿಯಲ್ಲಿರುವ ಫಲಾನುಭವಿಗಳು…,
Not available in DB ಈ ಸ್ಥಿತಿಯಲ್ಲಿರುವ ಪ್ರಕರಣಗಳಲ್ಲಿ ಫಲಾನುಭವಿಗಳು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಅಥವಾ ಪೋಸ್ಟ್ ಆಫೀಸ್‍ನಲ್ಲಿ ಹೊಸ ಬ್ಯಾಂಕ್ ಖಾತೆ ತೆರೆದು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ನೀಡಬೇಕಿದೆ.
Inactive ಈ ಸ್ಥಿತಿಯಲ್ಲಿರುವ ಪ್ರಕರಣಗಳಲ್ಲಿ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್‍ಗೆ ತೆರಳಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ಇಕೆವೈಸಿ ಮಾಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕಿದೆ. ಹಾಗೆಯೇ ಖಾತೆ ಚಾಲ್ತಿಯಾಗಿರುವ ಬಗ್ಗೆ ವಿವರವನ್ನು ನ್ಯಾಯಬೆಲೆ ಅಂಗಡಿಗಳಿಗೆ ನೀಡಬೇಕಿದೆ.
ಡಿ.ಬಿ.ಟಿ ಮುಖಾಂತರ ಪಡಿತರ ಚೀಟಿ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡುವ ಯೋಜನೆ ಸಂಬಂಧ ಬ್ಯಾಂಕ್ ಖಾತೆಯು Inactive/ Not available in DB ಸ್ಥಿತಿಯಲ್ಲಿರುವ ಫಲಾನುಭವಿಗಳ ಪಟ್ಟಿಯನ್ನು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರದರ್ಶಿಸಲಾಗಿದ್ದು, ಪಟ್ಟಿಯಲ್ಲಿರುವ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಜುಲೈ, 19 ರೊಳಗೆ ಸರಿಪಡಿಸಲು ಹಾಗೂ ಸರಿಪಡಿಸಿಕೊಂಡಿರುವ ವಿವರವನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ನೀಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೋರಿದ್ದಾರೆ.