ಮಡಿಕೇರಿ ಜು.14 : ಸಮಯೋಚಿತ ಲೇಖನಗಳ ಹರಿಕಾರ ಬಾಳೆಯಡ ಕಿಶನ್ ಪೂವಯ್ಯನವರ ಲೇಖನಗಳನ್ನು ಶಕ್ತಿ ಮತ್ತಿತರ ಪತ್ರಿಕೆಗಳಲ್ಲಿ ಓದುತ್ತಿದ್ದಾಗ ಇವರ ಯಾವುದೇ ಲೇಖನದಲ್ಲಿ ಪೂರ್ವಾಗ್ರಹ ಪೀಡಿತ ವಿಷಯಗಳ ಮೆರವಣಿಗೆ ಕಾಣುತ್ತಿರಲಿಲ್ಲ. ಕಾಲಕ್ಕೆ ತಕ್ಕಂತೆ ಮಾತ್ರವಲ್ಲ ಹೇಳಲೇಬೇಕಾದ ವಿಷಯಗಳ ಕುರಿತು ಕೇಳುವವರಾರೂ ಇಲ್ಲವೆಂದು ಭಾವಿಸಿಕೊಂಡಾಗ ಇವರ ಲೇಖನ ಪ್ರತ್ಯಕ್ಷವಾಗುತ್ತಿತ್ತು. ಅಂತಹ ಹಲವಾರು ಲೇಖನಗಳ ಸರಮಾಲೆಯನ್ನು ಸುಂದರ ಮಾಲೆಯಾಗಿ ಪೋಷಿಸಿದ ಕೃತಿಯೇ “ರಾಜಕೀಯ ಮತ್ತು ಪ್ರಕೃತಿ”
ಕೃತಿಯಲ್ಲಿ ಅಡಗಿರುವ ಮೊದಲ ಲೇಖನ “ಮಡಿಕೇರಿ ದಸರಾ” ಅಂದು ದೇವಾತಾ ಕಾರ್ಯ ಇಂದು ರಾಜಕೀಯ ಮೇಲಾಟ ಎಂಬ ಶೀರ್ಷಿಕೆಯನ್ನು ಹೊತ್ತು ತಂದಿದೆ. ಪಲ್ಲಕ್ಕಿ ಮತ್ತು ಲ್ಯಾಟಿನ್ ದೀಪಗಳ ಬೆಳಕಿನಲ್ಲಿ ನಡೆಯುತ್ತಿದ್ದ ದಸರಾದ ಇಂದಿನ ವೈಭವವನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಶಕ್ತಿ ದೇವತೆಗಳ ನವರಾತ್ರಿಯ ವೈಭವದ ಒಂಬತ್ತು ದಿನಗಳ ಉತ್ಸವದ ಪದಾಧಿಕಾರಿಗಳ ಅಯ್ಕೆಯ ಒಂಬತ್ತು ತಿಂಗಳ ಮೇಲಾಟದ ವಿವರಗಳನ್ನು ಅತ್ಯಂತ ಸೂಕ್ಷ್ಮವಾಗಿ, ಸೂಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ದೇವತಾ ಕಾರ್ಯ ದಸರಾವನ್ನು ಸಿನಿಮೀಯ ಕೃತ್ಯದಂತೆ ಕಂಗೊಳಿಸಲು ಪ್ರಯತ್ನಿಸಿದವರಿಗೆ ಬೈಲಾ ತಿದ್ದುಪಡಿ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂಬುದು ಇವರ ಪ್ರಶ್ನೆ. ಮಡಿಕೇರಿ ದಸರಾ ನಾಡಹಬ್ಬ ಎಂದರೆ ಸಾಮಾನ್ಯ ಜನರ ಹಬ್ಬವಾಗದೇ ಹೊರನಾಡ ಹಬ್ಬವಾಗುತ್ತಿರುವ ಬಗ್ಗೆ ಸಮಸ್ತ ನಾಗರೀಕರ ಪರವಾಗಿ ಕೇಳಿರುವ ಇವರ ಪ್ರಶ್ನೆಗಳನ್ನು ನೀವೂ ಕೂಡ ಒಮ್ಮೆ ಓದಲೇಬೇಕು. ಎರಡನೆಯ ಲೇಖನ ಕೊಡಗಿನ ಹೋರಾಟಗಳು ಹಳಿ ತಪ್ಪುವ ಕಾರಣಗಳೇನೆಂದು ವಿವರವಾಗಿ ವಿವರಿಸಿದ್ದಾರೆ. ಅದು ಡಾ. ಕಸ್ತೂರಿ ರಂಗನ್ ಅಥವಾ ಗಾಡ್ಗೀಳ್ ವರದಿಗಳ ವಿಚಾರವಾಗಿರಬಹುದು ಹೈಟೆನ್ಷನ್ ಮಾರ್ಗದ ಹೋರಾಟ, ಕೊಡಗಿನ ಜಮ್ಮಾ ಸಮಸ್ಯೆಯ ಪರಹಾರದ ಕುರಿತಾಗಿ ಇರಬಹುದು. ರೈಲು ಮಾರ್ಗ, ರೆಸಾರ್ಟ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸಹ ಉಲ್ಲೇಖಿಸಲಾಗಿದೆ. ಕೊಡಗಿನ ಹೋರಾಟಗಳ ನಡುವೆ ರಾಜಕಾರಣಿಗಳು ಅಥವಾ ಅವರ ಬೆಂಬಲಿಗರ ಪಾತ್ರವೇನು ಎಂಬುದನ್ನು ಅರ್ಥವತ್ತಾಗಿ ವಿವರಿಸಿದ್ದಾರೆ.
ಕೊಡಗಿನ ಏಕ ಸಂಘಟನೆಯ ಅಗತ್ಯತೆ ಮತ್ತು ಕೋಮು ಗಲಭೆಯ ಆತ್ಮ ವಿಮರ್ಶೆಯ ಕುರಿತು ಜಾತಿ ಜನಾಂಗಗಳ ತೂತುಗಳನ್ನು ತೆರೆದಿಟ್ಟು ವಿಧ್ಯಾಭ್ಯಾಸ ನೀಡದೇ ವಧಾಸ್ಥಾನಕ್ಕೆ ಕರೆದೊಯ್ದುತ್ತಿರುವ ಧರ್ಮಭೀರುಗಳ ಬಗ್ಗೆ, ನಮ್ಮ ಕಣ್ಣ ಮುಂದೆಯೇ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ನಶಿಸಿ ಹೋಗುತ್ತಿರುವ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಾದ ವಿಚಾರಗಳನ್ನು ಮುಕ್ತವಾಗಿ ತೆರೆದಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾವೇರಿ ಜನಾಂಗೀಯ ಗುಂಪುಗಳ ಸ್ವಪ್ರತಿಷ್ಠೆಗೆ ಬಲಿಯಾಗುತ್ತಿರುವ ಬಗ್ಗೆ ಮತ್ತು ಕೊಡಗಿನಲ್ಲಿಯೂ ಮೆಲ್ಲಗೆ ಅಡಿಯಿಟ್ಟಿರುವ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ಬರೆದಿದ್ದಾರೆ. ಚುನಾವಣೆ ಎಂಬ ನಾಟಕ ರಂಗದಿಂದ ಜನಾಂಗದ ಸಂಘಟನೆಗಳು, ಸಮಾಜಗಳು, ಅದರ ಪ್ರಮುಖರು ದೂರವಿರುವುದು ಜನಾಂಗದ ಅಭಿವೃದ್ಧಿಯ ದೃಷ್ಟಿಯಿಂದ ಒಳಿತು ಕೆಡುಕುಗಳ ವಿಮರ್ಶೆ ನಮ್ಮ ಜಿಲ್ಲೆಯ ಹಿಂದಿನ ನಾಯಕರು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ವಿಧಾನ ಸೌಧದ ಕಲ್ಲುಗಳು ಮೌನವಾಗುತ್ತಿದ್ದವು ರಾಜ್ಯಕ್ಕೆ ಮುಖ್ಯಮಂತ್ರಿ, ರಾಜ್ಯಪಾಲರು, ಸ್ಪೀಕರ್‌ಗಳನ್ನು ನೀಡಿದ ಜಿಲ್ಲೆಯಲ್ಲಿ ವೈಯುಕ್ತಿಕ ತೇಜೋವಧೆಯ ತಾಣವಾಗುತ್ತಿರುವ ವಿಪರ್ಯಾಸವನ್ನು ನೋಡುತ್ತಿರುವ ನಮಗೆ ಅದರ ಒಳಗುಟ್ಟುಗಳನ್ನು ತೆರೆದಿಟ್ಟಿದ್ದಾರೆ. ರಾಜಕೀಯ ಭಾರತದ ಸಮಗ್ರ ಜನತೆಯ ಬೇಕು ಬೇಡಗಳನ್ನು ಅರ್ಥೈಸಿಕೊಂಡು ದುಡಿಯಬೇಕಾದ ಸಾಮಾಜಿಕ ಕ್ಷೇತ್ರ ಎಂಬ ವಿಷಯವನ್ನು ಮರೆತ ರಾಜಕಾರಣಿಗಳಿಗೆ ಮನದಟ್ಟು ಮಾಡಿಕೊಡಬೇಕಾದ ಅಗತ್ಯವನ್ನು ನಾವು ಕೂಡ ಒಮ್ಮೆ ಮುಟ್ಟಿನೋಡಿಕೊಳ್ಳುವಂತೆ ಚಿತ್ರಿಸಿದ್ದಾರೆ. ಸೃಜನ ಎಂಬುದು ಸ್ವಜನವಾಗಿದೆ.
ತಮ್ಮ ಜನರ ಜಾತಿ ಅಥವಾ ಕೋಮಿನವರ ಬೆಂಬಲ ಪಡೆದು ಗುಂಪುಗಾರಿಕೆ ನಡೆಸಿ ತಮ್ಮ ಸ್ವಾರ್ಥಕ್ಕೋಸ್ಕರ ಅಧಿಕಾರದ ಗದ್ದುಗೆಯೇರುವ ಮೋಹಕ್ಕೆ ಮತ ಮತದೊಳಗೆ ವಿಷ ಬೀಜ ಬಿತ್ತಿ ಜಾತಿಯತೆಯ ಕಚ್ಚಾಟದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕ. ಇಂದು ಯಾವ ಕೋಮಿನವರು ಪ್ರಾಬಲ್ಯವನ್ನು ಹೊಂದಿರುವವರೋ ಅವರೇ ಅಧಿಕಾರ ಚಲಾಯಿಸುತ್ತಾರೆ. ಜಾತಿ ಬಲ, ಹಣ ಬಲ, ತೋಳ್ಬಲ ಇಂದಿನ ರಾಜಕೀಯದ ಅಧಿಕಾರಕ್ಕೆ ಮೂಲ ಸೂತ್ರವಾಗಿ ನಿರುದ್ಯೋಗಿಗಳಿಗೆ ಅನಪೇಕ್ಷಿತ ಉದ್ಯೋಗ ನೀಡುವ ರಾಜಕೀಯದ ಹಣ ಗಳಿಸುವ ಕ್ಷೇತ್ರವಾಗಿದೆಯೆನ್ನುತ್ತಾರೆ. ಕುಸಿಯುತ್ತಿರುವ ಮೌಲ್ಯಾಧಾರಿತ ರಾಜಕಾರಣದ ಕುರಿತು ಇಂದಿನ ವಿದ್ಯಾವಂತರು ತಮ್ಮ ಪ್ರತಿಭೆಯನ್ನು ಜಾಲತಾಣಗಳಿಗೆ ಮೀಸಲಾಗಿರಿಸಿದ್ದಾರೆ ಎನ್ನುವ ಮಾತುಗಳು ಅಕ್ಷರಶಃ ಸತ್ಯವಾಗಿದೆ. “ಇಂದು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ವೇದಿಕೆಯಾಗಿದೆಯೇ ಹೊರತು ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಉಂಟುಮಾಡುವ ವೇದಿಕೆಯಾಗಿಲ್ಲ” ಇತ್ತೀಚಿನ ದಿನಗಳಲ್ಲಿ ನಾವು ನಾಯಕರುಗಳ ಮೇಲೆ ಇರುವ ಅಭಿಮಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೇವೆಯೋ ಹೊರತು ಅವರ ನಿಲುವುಗಳನ್ನು ಮತ್ತು ಉದ್ದೇಶಗಳನ್ನು ನಮ್ಮ ನಡೆಯಲ್ಲಿ ಅಳವಡಿಸಿಕೊಳ್ಳುವ ಮಾತೇ ಇಲ್ಲ ಎನ್ನುತ್ತಾರೆ.
ಲೇಖಕರು, ವಕೀಲರು, ನೋಟರಿಯೂ ಆಗಿರುವ ಬಾಳೆಯಡ ಕಿಸನ್ ಪೂವಯ್ಯನವರ ರಾಜಕೀಯ ಮತ್ತು ಪ್ರಕೃತಿ ಕೃತಿಯೂ ನನ್ನ ಕೈಗೆ ಸಿಕ್ಕಾಗ ಇನ್ನೂ ಸಹ ರಾಜ್ಯದ ಚುನಾವಣೆಯ ವಿಧಿ ವಿಧಾನಗಳು ಪ್ರಾರಂಭವಾಗಿರಲಿಲ್ಲ. ಅದಾಗಲೇ ಒಂದು ಕೃತಿಯ ಓದಿನಲ್ಲಿ ತೊಡಗಿದ್ದ ನನಗೆ ಇದನ್ನು ಓದಿಗೆತ್ತಿಕೊಳ್ಳುವ ವೇಳೆಗೆ ತಡವಾಗಿತ್ತು. ಪುಸ್ತಕವನ್ನು ತೆರೆದರೆ ಸಿಗುವ ಮೊದಲ ಪುಟವು “ಕೊಡವ ಮಕ್ಕಡ ಕೂಟ”ದ 62ನೆಯ ಸಾಹಿತ್ಯ ಮಾಲೆ ಎಂಬ ಅರಿವು ಮೂಡಿಸಿತ್ತು. ಮುಂದುವರಿದಾಗ ಪ್ರಕೃತಿ ಕುರಿತಾದ ಲೇಖನಗಳು ಅವರ ಮನಸ್ಸಿನ ಮಾತು “ಪ್ರಕೃತಿ ಎಂದರೆ ತಾಯಿ” ತಾಯಿಯ ಕುರಿತು ಏನು ಬರೆದರೂ ಚಂದವೇ ಆದರೆ ಪ್ರಕೃತಿಯ ಕುರಿತು ನೈಜ ಕಾಳಜಿಯುಳ್ಳವರ ಲೇಖಕರ ಒಂದೊಂದು ಲೇಖನವೂ ಹಿಂದಿನ ತಲೆಮಾರುಗಳ ತಪ್ಪುಗಳನ್ನು ಎತ್ತಿ ಹಿಡಿದು ಇಂದಿನ ತಲೆಮಾರಿಗೆ ತಿದ್ದಿಕೊಳ್ಳುವ ಅವಕಾಶವನಿತ್ತು ಮುಂದಿನ ಪೀಳಿಗೆಗೆ ದಾರಿದೀಪ ಆಗಲಿದೆಯೆಂದರೆ ಅದೇ ಸರಿಯಾದ ಮಾತು.
ಯಾವುದೇ ಪಂಥಕ್ಕೆ, ಯಾವುದೇ ಪಕ್ಷಕ್ಕೆ, ಯಾವುದೇ ಜಾತಿಮತದ ಮುಲಾಜಿಗೆ ಅಂಟಿಕೊಳ್ಳದೆಯೇ ತಮ್ಮ ಪ್ರಾಂಜಲ ಮನಸ್ಸಿನ ನೇರ ನುಡಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ ಮೇಲೆ ತಿಳಿಸಿದಂತೆ ಕೊಡಗಿನ ಪ್ರತಿಯೊಬ್ಬ ವ್ಯಕ್ತಿಯೂ ಓದಬೇಕಾದ ಕೃತಿ ಇದು ಎಂದು ಮತ್ತೊಮ್ಮೆ ಹೇಳುವೆ. ಕೊಡವ ಮಕ್ಕಡ ಕೂಟದ 62 ನೆಯ ಕೃತಿ ಇದಾಗಿದ್ದು 134 ಪುಟಗಳ 150 ರೂಪಾಯಿ ಬೆಲೆಯುಳ್ಳ ಪುಸ್ತಕವನ್ನು ತನ್ನ ತಂದೆ ತಾಯಿಗಳಿಗೆ ಅರ್ಪಣೆ ಮಾಡಿದ್ದಾರೆ. ಅಧ್ಯಕ್ಷರ ನುಡಿ ಬೊಳ್ಳಜ್ಜಿರ ಬಿ. ಅಯ್ಯಪ್ಪ ಅವರದು. ಕೆ.ಪಿ ಬಾಲಸುಬ್ರಹ್ಮಣ್ಯಂ ಕಂಜರ್ಪಣೆಯವರ ಸಂಕ್ಷಿಪ್ತ ಮುನ್ನುಡಿಯ ನೆಪದ ಜೊತೆಗೆ ತನ್ನ ಇಷ್ಟ ಮತ್ತು ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಲೇಖಕರು ಹಾಗೆಯೇ ನೆನೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟ.ಪಿ.ರಮೇಶ್‌ರವರ ಬೆನ್ನುಡಿಯೂ ಇದೆ. ಬಹಳ ಹಿಂದೆಯೇ ಮಾಡಬೇಕಾಗಿದ್ದ ಕೆಲಸವನ್ನು ಲೇಖಕರು ಈಗ ಕೈಗೆತ್ತಿಕೊಂಡಿದ್ದಾರೆ ಎಂಬುದು ನನ್ನ ಅನಿಸಿಕೆ. ಇವರ ಇನ್ನಷ್ಟು ಕೃತಿಗಳು ಕೊಡಗಿನ ಜನತೆಯ ಜತೆಜತೆಗೆ ರಾಜ್ಯದ ಓದುಗರಿಗೆ ತಲುಪುವಂತಾಗಲಿ ಎಂದರೆ ರಾಜ್ಯದ ಮತ್ತು ರಾಷ್ಟ್ರದ ಹಲವಾರು ಸಮಸ್ಯೆಗಳನ್ನು ಎತ್ತಿ ಹಿಡಿಯುವಂತಾಗಲಿ ಎಂದು ಹಾರೈಸೋಣ…
ಕೃತಿ ವಿಮರ್ಶೆ:- ರಾಜಕೀಯ ಮತ್ತು ಪ್ರಕೃತಿ
ಕೃತಿಕಾರರು:- ಬಾಳೆಯಡ ಕಿಶನ್ ಪೂವಯ್ಯ
ವಿಮರ್ಶಕರು:- ವೈಲೇಶ್ ಪಿ ಎಸ್ ಕೊಡಗು.