ಮಡಿಕೇರಿ ಜು.17 : ಯಾವುದೇ ವಿಚಾರಕ್ಕಾಗಿಯಾದರೂ ಸರಿಯೇ. ಹಿಂದು ಮುಂದು ಆಲೋಚಿಸದೆಯೇ ತಮ್ಮ ಮೂಗಿನ ನೇರಕ್ಕೆ ಸರಿಯೆನಿಸುವ, ಸಮಾಜದ ದೃಷ್ಟಿಯಿಂದ ತಪ್ಪು ಎನ್ನಬಹುದಾದ ಕೃತ್ಯವನ್ನು ಯಾರಾದರೂ ಮಾಡಿದರೆ ಆ ಕೃತ್ಯದ ಪರಿಣಾಮವಾಗಿ ಏನೆಲ್ಲಾ ಮತ್ತು ಯಾರಿಗೆಲ್ಲಾ ಯಾವ್ಯಾವ ರೀತಿಯ ತೊಂದರೆಗಳು ಸಂಭವಿಸಬಹುದು ಎಂಬುದನ್ನು ನಾವಿಂದು ಕಾಣುತ್ತಿದ್ದೇವೆ. ಅಂತಹ ಒಂದು ಕೃತ್ಯ ನಡೆದ ಸಂದರ್ಭದಲ್ಲಿ ನಡೆದ ಘಟನೆಗೆ ನೇರವಾಗಿ ಯಾವುದೇ ರೀತಿಯ ಸಂಬಂಧ ಇಲ್ಲದೇ ಇದ್ದರೂ ಸಹ ಕೇವಲ ಕೃತ್ಯದ ರೂವಾರಿಯ ಜಾತಿ ಮತದವರೆಂಬ ಏಕೈಕ ಕಾರಣದಿಂದ ಅದೆಷ್ಟು ಮುಗ್ಧರಿಗೆ ನೋವಾಗಿರಬಹುದು. ಅದೆಷ್ಟು ಯುವ ಮನಗಳು, ಅದೆಷ್ಟು ಹಿರಿಯ ಕಿರಿಯ ಜೀವಗಳು ಆಸರೆ ಕೈತಪ್ಪಿ ಹೋಗಿ ಜೀವಮಾನದ ಗೊತ್ತು ಗುರಿಗಳು ದಿಕ್ಕುತಪ್ಪಿ ಅಲ್ಲೋಲ ಕಲ್ಲೋಲವಾಗಿಬಹುದು ಎಂದು ನಾವೆಲ್ಲರೂ ಚಿಂತಿಬೇಕಾಗಿದೆ. ಅಂತಹ ಒಂದು ಕುಟುಂಬದ ಏಳುಬೀಳುಗಳ ನಡುವೆ ಬೆಂಕಿಯಲ್ಲಿ ಅರಳಿದ ಹೂವು ಈ ಕೃತಿಕಾರರಾದ ವಿಜಯಾ ವಿಷ್ಣುಭಟ್ ಡೋಂಗ್ರೆ. ತಾನು ಚಿತ್ಪಾವನ ಬ್ರಾಹ್ಮಣರ ಪಂಗಡಕ್ಕೆ ಸೇರಿದ ಕಾರಣಕ್ಕಾಗಿ ವಿದ್ಯಾಭ್ಯಾಸ ಮೊಟಕುಗೊಂಡಿತು . ಇದ್ದ ಸ್ವಂತ ಉದ್ಯಮವನ್ನು ಕಳೆದುಕೊಂಡು ಪ್ರಾಣ ಮತ್ತು ಮಾನ ರಕ್ಷಣೆಯ ದೃಷ್ಟಿಯ ಜೊತೆಗೆ ಉದರಂಭರಣದ ಚಿಂತೆಯೊಡನೆ ದಿಕ್ಕು ದೆಸೆ ಅರಿಯದೇ ಊರೂರು ತಿರುಗುವ ತಂದೆತಾಯಿಗಳ ಜತೆ ತಂಗಿಯರ ಜವಾಬ್ದಾರಿಯ ಹೊರೆ. ಬಂಧುಗಳ ಮನೆಯಿಂದ ಮತ್ತೊಂದು ಮನೆಗೆ ಆಗಾಗ್ಗೆ ಬದಲಾಗುವ ಉದ್ಯಮವನ್ನು ನಿಭಾಯಿಸಲು ಕೊರಗುವ ತಂದೆ. ವಿದ್ಯೆಯನ್ನು ಪಡೆಯುವ ಬಯಕೆಯಿಂದ ಅಪ್ಪನ ಮನೆಯ ಭಾಂಡೆಯಿಂದ ಚಿಕ್ಕಮ್ಮನ ಮನೆಯ ಒಲೆಗೆ ಬಿದ್ದ ಕತೆ. ನಂತರ ವಾಪಸ್ಸು ಮನೆಗೆ ಬಂದು ಹಪ್ಪಳ ಸಂಡಿಗೆ ಎನಿಸಿಕೊಂಡು ಜೀವ ಹಿಡಿಯಾಗಿ ಹಿಡಿದುಕೊಂಡಾಯಿತು.
ಬಾಲಕಿ ವಿಜಯಾಳ ತಾಯಿಯಂತೂ ಮಧ್ಯದ ಮಗಳ ವಿದ್ಯಾಭ್ಯಾಸದ ಕನಸನ್ನು ನಿಲ್ಲಿಸಿದ್ದರು. ಅಂತಹ ಸಮಯದಲ್ಲಿ ಹಿಂದಿ ಕಲಿಕೆಯ ಅಕಸ್ಮಾತ್ ಒದಗುವಿಕೆ ಮುಂದೆ ಅದೇ ಬಾಳಿಗೆ ದಾರಿದೀಪವಾಗುತ್ತದೆಯೆಂಬ ನಂಬಿಕೆ ಯಾರಿಗೂ ಇರಲಿಲ್ಲ. ಸ್ವಾಭಿಮಾನಿಯಾದ ಆದರೆ ಅರೆಗಿವುಡುತನವನ್ನು ಹೊಂದಿದ್ದ ತನ್ನ ತಂದೆ ಇಂತಹ ಕಷ್ಟಕಾಲದಲ್ಲಿ ದೇಶಾಂತರ ಹೋಗಿಬಿಟ್ಟರೆ ಕುಟುಂಬದ ಸದಸ್ಯರ ಪಾಡೇನು ಆಗಬಹುದು ಅಲ್ವೇ. ತನ್ನ 15ನೆಯ ವಯಸ್ಸಿನಲ್ಲಿ ರಘುರವರೊಂದಿಗೆ ಅನಿರೀಕ್ಷಿತ ಮತ್ತು ಅನಪೇಕ್ಷಿತ ಎನ್ನಲಾರದ ಸ್ಥಿತಿಯಲ್ಲಿ ಮದುವೆ ಆಯಿತು. “ನಿನಗೆ ಕೊಡಲು ನನ್ನಲ್ಲಿ ಏನೂ ಇಲ್ಲ ಆದರೆ ಒಂದು ಮಾತು ಯಾವತ್ತೂ ಸ್ವಾಭಿಮಾನವನ್ನು ಬಿಡಬೇಡ. ಅದೇ ಹೆಣ್ಣಿಗೆ ಆಭರಣ. ಮಾನವರಿಗೆ ಆತ್ಮಸ್ಥೈರ್ಯವೇ ನಿಜವಾದ ಗೆಳೆಯ” ಎಂಬ ತಂದೆಯ ಮಾತಿನೊಂದಿಗೆ ಗಂಡನ ಮನೆಗೆ ಆಗಮನ. ಅತ್ತೆ ಮತ್ತು ವಾರಗಿತ್ತಿಯರ ಚುಚ್ಚುನುಡಿಗಳ ನಡುವೆ ಗಂಡನೊಡನೆ ಕೊಡಗಿನೆಡೆಗೆ ಬಾಳ ಪಯಣ. ಅಮ್ಮನ ನೋವುಗಳಿಗೆ ಉತ್ತರವೆಂಬಂತೆ ಗಂಡುಮಗುವಿನ ಜನನ. ಗಂಡನ ನಿರ್ಲಕ್ಷ್ಯವೋ ಅಥವಾ ಅಸಹಾಯಕತೆಯೋ ಬೇಜವಾಬ್ದಾರಿಯಿಂದ ಜವಾಬ್ದಾರಿಯತ್ತ ಸಾಗಿದ ಬದುಕು ನಂತರ ಹಲವಾರು ತಿರುವುಗಳ ಬಳಿಕ ವಿದ್ಯಾರ್ಜನೆಗೆ ದಾರಿಯಾಯಿತು. ಸೋದರ ಮಾವನ ಮದುವೆಯಲ್ಲಿ ಚಿಲ್ಲರೆ ಕೊಟ್ಟ ಪ್ರಸಂಗವಂತೂ ಇಂದಿಗೂ ಹಲವರಿಗೆ ಒಂದು ರೀತಿಯ ಪಾಠವಾಗಿದೆ. ಅದೆಷ್ಟು ಮಹಿಳಾ ಮಣಿಗಳು ಇಂತಹ ಕೊಂಕುನುಡಿಗಳನ್ನು ಅರಗಿಸಿಕೊಳ್ಳಲಾರದೇ ಮಾನ ಪ್ರಾಣಗಳನ್ನು ಕಳೆದುಕೊಂಡಿದ್ದಾರೋ ಎನಿಸದಿರದು. ಈ ಎಲ್ಲ ಸಂಕಟಗಳ ನಡುವೆ ರಘುವಿಗೆ ನೌಕರಿಯೊಂದು ದೊರಕಿ ದೂರದ ಊರಾದ ಕೊಡಗಿನ ಚೆಯ್ಯಂಡಾಣೆಯೆಂಬುದು ಇವರ ಪಾಲಿಗೆ ಸ್ವರ್ಗವಲ್ಲದೇ ಮತ್ತೇನೂ ಆಗಲಿಲ್ಲ. ಊರಿನಿಂದ, ನಿಂದಕರಿಂದ, ಉಪಟಳಗಳಿಂದ ದೂರವಾದರೂ ಮುಂಬಯಿಯಂತಹ ಸಹರದಿಂದ ಬಂದ ಹೆಣ್ಣುಮಗಳು ಕೊಡಗಿನ ಬೆಟ್ಟಗಾಡಿನ ಹಳ್ಳಿ ಚೆಯ್ಯಂಡಾಣೆಯಂತಹ ಸೀಮಿತ ಜನಗಳ ನಡುವೆ ಬೆರೆತು ಬದುಕು ಕಟ್ಟಕೊಂಡಂತಹ ಕಥೆ ಅವಿಸ್ಮರಣೀಯ ಅಲ್ವೇ.
ವಯೋಸಹಜವಾದ ಬದುಕಿನ ಚಿತ್ರಣಗಳೆಲ್ಲವೂ ಸಾಧಾರಣವಾಗಿ ಸಾಗಿ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಜೊತೆಗ ಬಾಳಿನ ಉನ್ನತಿಯೂ ಸಾಗಿತ್ತು. ಹೌದಲ್ವಾ ಬದುಕೆಂದರೆ ಕೇವಲ ಹೊಟ್ಟೆಬಟ್ಟೆಗೆ ದುಡಿಯುವುದಷ್ಟೇ ಅಲ್ಲ. ಅದರಾಚೆಗೂ ಒಂದು ಬದುಕಿದೆ ಎಂದು ಕಂಡುಕೊಂಡ ವಿಜಯಾ ವಿಷ್ಣು ಭಟ್ ತನ್ನ ಎಳೆಯ ವಯಸ್ಸಿನ ಹಂಬಲವಾದ ಓದು ಬರೆಹಗಳ ಕಡೆಗೆ ಅನಾಯಾಸವಾಗಿ ತಿರುಗಿಕೊಂಡು ವಿದ್ಯೆಯೇ ನೈವೇದ್ಯ ಎಂಬಂತಾಗಿದ್ದವರು ಕವಯಿತ್ರಿ ಎಂದು ಗುರುತಿಸಿಕೊಳ್ಳುವಂತಾದ ಪರಿ ಅನನ್ಯ. ಒಬ್ಬ ನಿಜವಾದ ಕವಿ ಯಾ ಸಾಹಿತಿಗಳಲ್ಲಿ ಇರಬೇಕಾದ ಸಾಮಾಜಿಕ ಪ್ರಜ್ಞೆ ಜಾಗ್ರತಗೊಂಡು ಮುಂದೆ ಸಾಮಾಜ ಸೇವಕಿಯಾಗಿ ಮಾತ್ರವಲ್ಲದೇ ಅಪರೂಪದ ದೇಶಭಕ್ತಿಯ ಪ್ರತೀಕವಾಗುವಂತೆ ಮಾಡಿತು. ಇದೇ ನೋಡಿ ಶಿಕ್ಷಣದ ಮಹತ್ವ ಮಕ್ಕಳಿಗೆ ಶಿಕ್ಷಕರು ಓದು ಬರೆಹ ಮಾತ್ರವಲ್ಲದೇ ಉನ್ನತ ವಿಚಾರಗಳನ್ನು ತಿಳಿಸುತ್ತಾ ತಾವೂ ಕೂಡ ಅದೇ ಹಾದಿಯಲ್ಲಿ ನಡೆಯುವರೆಂಬುದಕ್ಕೆ ಜೀವಂತ ಸಾಕ್ಷಿಯಾದವರು ನಮ್ಮ ವಿಜಯಾ ಟೀಚರ್. 1990 ರ ದಶಕದಲ್ಲಿ ಮೊದಲ್ಗೊಂಡ ಇವರ ಸಮಾಜ ಸೇವೆಯು ತನ್ನಂತೆ ಕಷ್ಟ ಕಾರ್ಪಣ್ಯಗಳಿಗೊಳಗೊಂಡ ಅದೆಷ್ಟೋ ಮಹಿಳಾಮಣಿಗಳ ಸಂಕಷ್ಟಗಳನ್ನು ತೊಡೆಯುವತ್ತ ಸಾಗಿದುದರಲ್ಲಿ ಅತಿಶಯಯೋಕ್ತಿಯೇನೂ ಅಲ್ಲ. ತನಗೆ ದೊರಕದೇ ಹೋದ ಸಹಾಯ ಸಹಕಾರಗಳನ್ನು ತಾನು ಇನ್ನೊಬ್ಬರಿಗೆ ನೀಡುತ್ತಿರುವೆನೆಂಬ ಅತ್ಮಸಂತೋಷದ ಮತ್ತು ತೃಪ್ತಿಯ ನಡುವೆ ಉರುಳಿದ ವರುಷಗಳ ಲೆಕ್ಕವೇ ಸಿಗಲಿಲ್ಲ. ಹಾಗೆಯೇ ತನ್ನ ಅರಿವಿಗೆ ಬಾರದ ನಂತರ ಅರಿವಿಗೆ ಬಂದ ಸಂತ್ರಸ್ಥೆಯರಿಗೆ ಒಂದಷ್ಟು ಸಹಾಯ ಮಾಡಿದ ತೃಪ್ತಿ ಕೂಡ ಇತ್ತು. ಇದೇ ರೀತಿಯಲ್ಲಿ ಸಾಗಿದ್ದರೆ ಅದೇನೇನು ಆಗಲು ಸಾಧ್ಯವಿತ್ತೋ ಅರಿವಿಗೆ ನಿಲುಕಲಿಲ್ಲ. ಈ ಓಘವನ್ನು ತಡೆಯಲು ವಿಧಿ ಆರಿಕೊಂಡ ವಿಧಾನ ಮಾತ್ರ ಮನಕಲಕುವಂತಹುದಾಗಿತ್ತು. ಅಮೇರಿಕದ ಮಗನ ಮನೆ ಮತ್ತು ಮನದಲ್ಲಿ ಮೂಡಿದ ಅದೆಷ್ಟೋ ಸಂಚಲನಗಳು ಆತನ ಪ್ರಾಣಕ್ಕೆ ಸಂಚಾಕಾರವಾಯಿತು. ಮಾತ್ರವಲ್ಲ ಮುಂಬಯಿಯಿಂದ ಮುಂಡಾಜೆಗೆ ಮುಂಡಾಜೆಯಿಂದ ಚೆಯ್ಯಂಡಾಣೆಗೆ ಅಲ್ಲಿಂದ ವಿರಾಜಪೇಟೆಗೆ ಮತ್ತೆ ಬೆಂಗಳೂರಿನಂತಹ ಮಹಾನಗರದ ಸದ್ದು ಗದ್ದಲದೊಳಗೆ ಅಡಗಿರುವ ಮಾರತ ಹಳ್ಳಿಯ ಆಗಸದಲ್ಲಿ ಹಾರಡುವ ವಿಮಾನಗಳ ಆರ್ಭಟಕ್ಕೆ ಕಿವಿಯಾಗುವಂತಾಯಿತು. ಪುಟ್ಟ ಬಾಲೆ ವಿಜಯಾ ಅಪಾತ್ರ ಸೊಸೆಯಾಗಿ ಸುಶಿಕ್ಷಿತ ತಾಯಿಯಾಗಿ ಅಕ್ಕರೆಯ ಶಿಕ್ಷಕಿಯಾಗಿ ಸಾಮಾಜಿಕ ಮತ್ತು ದೇಶಭಕ್ತ ಕಾರ್ಯಕರ್ತೆಯಾಗಿ ಕಂಡುಂಡು ನವರಸಗಳನ್ನು ತನ್ನೊಳಗೆ ಬಚ್ಚಿಡದೇ ಲೇಖನಿಯ ಸಹಾಯದಿಂದ ಒಂದೊಂದಾಗಿ ಬಿಚ್ಚಿಡುತ್ತಾ ಹೋದರು. ಹಾಗೆ ಸಾಗುವ ಹಾದಿಯಲ್ಲಿ ದೊರಕಿದ ಸುಜನರಿಂದ ಒಂದಷ್ಟು ಗೌರವಾಧರಗಳಿಗೂ ಭಾಜನರಾದರು.
ಬದುಕು ಕಲಿಸಿದ ಪಾಠಗಳು ವಯೋಸಹಜವಾಗಿ ಮಾಗುತ್ತಾ ಬಂದು ಆಧ್ಯಾತ್ಮದ ಬಾಗಿಲು ಬಡಿಯಲು ಹೆಚ್ಚು ವರುಷಗಳೇನೂ ಬೇಕಾಗಲಿಲ್ಲ. ನೋವಿತ್ತವರೆಲ್ಲರೂ ಅಳಿಯದಿದ್ದರೂ ನೋವುಗಳೆಲ್ಲಾ ಅಳಿದಿರುವುದಕ್ಕೆ ಸಾಕ್ಷಿಯಾಗಿ ಮನದೊಳಗಿನ ದುಗುಡ ದುಮ್ಮಾನಗಳೆಲ್ಲವೂ ಪ್ರೀತಿ ವಿಶ್ವಾಸಗಳಾಗಿ ಮಾರ್ಪಾಡುಗೊಂಡವು. ಆಧ್ಯಾತ್ಮದ ಮೊದಲ ಮೆಟ್ಟಿಲು ಕ್ಷಮಾಪಣೆಯೆಂಬುದನ್ನು ತಿಳಿಸಿದವರು ಯಾರೆಂದು ಅರಿಯುವ ಮುನ್ನವೇ ತಾನೋರ್ವ ಸಂತನಂತಾದ ವಿಜಯಾ ವಿಷ್ಣು ಭಟ್ಟರಿಗೆ ಈಗ ವಿಷ್ಣುಭಟ್ಟ್‌ರವರು ನಿಜವಾದ ವಿಷ್ಣುವೇ ಆಗಿಹೋದರು. ತನ್ನನ್ನು ತಾನು ಹಿಂತಿರುಗಿ ನೋಡುವ ಅವಕಾಶ ಮತ್ರವಲ್ಲ ಅಂತಹ ಮನೋಧರ್ಮ ಕೂಡ ಎಲ್ಲರಿಗೂ ಸಿಗುವುದಿಲ್ಲ. ನಮ್ಮ ಬಾಳಿನ ಕೊರತೆಗಳೇ ನಮಗೆ ಬದುಕಿನ ನಿಜವಾದ ಸಿರಿವಂತಿಕೆಯನ್ನು ತುಂಬು ಸಾಧನ ಮಾತ್ರವಲ್ಲ ಅದೇ ನಿಜವಾಗಿಯೂ ನಮ್ಮ ಸಾಧನೆಯ ಹಾದಿಗೆ ಹಾದಿ ದೀಪವೆಂಬ ನಂಬುಗೆಯನ್ನುವ ತಮ್ಮ ಸಮಾಜ ಸೇವೆಯಲ್ಲಿ ಬಿಂಬಿಸುತ್ತಾ ಬಂದ ವಿಜಯಾ ಮೇಡಂ ತನ್ನ ಬರೆಹದ ಮೂಲಕವೂ ಸಾಮಾಜಿಕ ಕಳಕಳಿಯಿಂದ ತನ್ನದೇ ಬಾಳ ಪಡಿಪಾಟಲುಗಳನ್ನು ಪರಿಪರಿಯ ಪಾಠವಾಗಿಸಿ ವಿಜಯೋತ್ಥಾನವೆಂಬ ಕೃತಿಯಾಗಿಸಿದ್ದಾರೆ ಎನ್ನಲು ನನಗೆ ಹರ್ಷವಾಗುತ್ತದೆ.
ಇಂದಿನ ಸಮಾಜದ ಮಹತ್ವಾಕಾಂಕ್ಷೆಯ ಜನರ ನಡುವೆ ಚಿಕ್ಕ ಪುಟ್ಟ ವಿಷಯಗಳಿಗೆ ಜೀವಹಾನಿ ಮಾಡಿಕೊಳ್ಳುತ್ತಿರುವ ಅಪ್ರಭುದ್ಧ ಮನಸ್ಸುಗಳ ಕುರಿತು ಅಪಾರ ನೋವಿರುವ ಇವರು ತಮ್ಮ ಕೃತಿಯ ಮೂಲಕ ಯುವಪೀಳಿಗೆಗಳಿಗೆ ದಾರಿ ದೀಪವಾಗಿದ್ದಾರೆ ಎಂದರೆ ತಪ್ಪಾಗಲಾರದು.ಇಂದಿನ ಪ್ರಬುದ್ಧ ವಿಜಯಾ ವಿಷ್ಣು ಭಟ್ ಕೂಡಾ ಒಂದು ಕಾಲದ ಅಪ್ರಬುದ್ಧ ಯುವತಿಯಾದರೂ ಬಂದೊದಗಿದ ಸಂಕಷ್ಟಗಳ ಸರಮಾಲೆಗಳನ್ನು ಎದುರಿಸಿದ ಮತ್ತು ಹೆದರಿಸಿದ ಪರಿಯನ್ನು ತಿಳಿಸುತ್ತಾ ಸಾಗಿದ್ದಾರೆ. ಒಂದೆಡೆ ಬಂಧುಗಳು ಸಾವಿರವಿದ್ದರೂ ಗಂಡನಂತಹ ಒಡನಾಡಿ ಬೇರೊಬ್ಬರಿಲ್ಲ. ಸ್ಥಿತಪ್ರಜ್ಞರಾದ ದಂಪತಿಗಳಿಂದ ಮಾತ್ರ ಬಾಳಿನ ಸಾರ್ಥಕತೆಯನ್ನು ಪಡೆಯಲು ಸಾಧ್ಯವೆಂದು ಪ್ರತಿಬಿಂಬಿಸುವ ಕೃತಿ ಇದಾಗಿದೆ. ನತಮಸ್ತಕ ಕಷ್ಟಗಳ ನಡುವೆ ತಮ್ಮ ಏಳಿಗೆಯ ಕುರಿತು ತಾವಲ್ಲದೇ ಬೇರೊಬ್ಬರು ಚಿಂತಿಸಲು ಸಾಧ್ಯವಿಲ್ಲವೆಂಬುದನ್ನು ತನ್ನ ಕಾಲ್ಪನಿಕ ಗೆಳತಿ ಸರೂ ಜೊತೆಗೂಡಿ ಹಂಚಿಕೊಂಡ ಕಥೆಗಳು ತನ್ನನ್ನು ತಾನು ಹೊಗಳಿಕೊಳ್ಳುವುದಕ್ಕಿಂತ “ನೋಡು, ಕೇಳು, ಕಲಿ, ತಾಳು, ದುಡುಕದಿರು, ಮುಂದಿದೆ ಬಾಳು” ಎಂದು ತಿಳಿಸುತ್ತಾ ಸಾಗುತ್ತದೆ. ವಿಜಯದ್ವಯರು ಸೇರಿ ಬರೆದಿರುವ ಮುನ್ನುಡಿ ಬೆನ್ನುಡಿ, ಮತ್ತೋರ್ವ ವಿಜಯಳ ಆಶಯ ನುಡಿ, ಮುಖಪುಟ ಬಿಂಬಿಸುವ ಪಾಪಸುಕಳ್ಳಿಯೇ ತುಂಬಿದ ಬಾಳ ಹಾದಿ ಓದುಗರ ಮನದಲ್ಲಿ ತಮ್ಮ ಬಾಳಿಗೆ ಒಂದಷ್ಟು ಸ್ವಯಂ ಧೈರ್ಯ ತುಂಬಿಕೊಂಡರೆ ಬಾಳಪಯಣದ ಆತ್ಮಗಾಥೆ ವಿಜಯೋತ್ಥಾನದ ಪ್ರಸ್ತುತಿ ಸಾರ್ಥಕವಾದಂತೆ.
ಕೃತಿಕಾರರು:- ವಿಜಯಾ ವಿಷ್ಣುಭಟ್ ಡೋಂಗ್ರೆ.
ವಿಮರ್ಶಕರು:- ವೈಲೇಶ್ ಪಿ ಎಸ್ ಕೊಡಗು-8861405738.