ಮಡಿಕೇರಿ ಜು.17 : ಕಳೆದ ಹಲವು ದಶಕಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದ ಸೋಮವಾರಪೇಟೆಯ ತಲ್ತರೆಶೆಟ್ಟಳ್ಳಿಯ ತಮ್ಮ ಜಾಗ ಮತ್ತು ಗಿಡಗಳನ್ನು ತೆರವುಗೊಳಿಸುವ ಮೂಲಕ ಅರಣ್ಯ ಇಲಾಖೆ ಅನ್ಯಾಯವೆಸಗಿದೆ ಎಂದು ಆರೋಪಿಸಿರುವ ಕೃಷಿಕ ಜಿ.ಟಿ.ಭೋಜರಾಜ, ಶಾಸಕರು ಸ್ಥಳಕ್ಕೆ ಭೇಟಿ ನೈಜಾಂಶವನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಳ್ಳಿ ಹೋಬಳಿಯ ತಲ್ತರೆಶೆಟ್ಟಳ್ಳಿಯಲ್ಲಿ ತಮ್ಮ ಅಜ್ಜನಿಗೆ 1939 ರಲ್ಲಿ 90 ಸೆಂಟ್ ಜಾಗವನ್ನು ಮಂಜೂರು ಮಾಡಲಾಗಿತ್ತು. ಬಳಿಕ ಅದರ ಆಸುಪಾಸಿನ ಜಾಗವನ್ನು ಒಳಗೊಂಡಂತೆ ಸುಮಾರು 4.50 ಎಕರೆ ಪ್ರದೇಶದಲ್ಲಿ ಕಳೆದ ಐದು ದಶಕಗಳಿಂದ ತಾವು ಕಾಫಿ, ಕರಿಮೆಣಸು ಕೃಷಿಯನ್ನು ನಡೆಸಿಕೊಂಡು ಬಂದಿದ್ದೇವೆ. ಇದೀಗ ಅರಣ್ಯ ಇಲಾಖೆ ಜಾಗದಲ್ಲಿದ್ದ 7 ಸಾವಿರಕ್ಕೂ ಹೆಚ್ಚಿನ ಕಾಫಿ, ಕರಿಮೆಣಸು ಮತ್ತು ಕಿತ್ತಳೆ ಗಿಡಗಳನ್ನು ತೆಗೆದು, ಜಾಗವನ್ನು ತೆರವುಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ 1993 ರಲ್ಲೆ ಜಾಗ ಮಂಜೂರಾತಿಗೆ ಅಕ್ರಮ ಸಕ್ರಮ ಸಮಿತಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ತನ್ನ ಅರ್ಜಿ ತಿರಸ್ಕøತವಾದ ಹಿನ್ನೆಲೆಯಲ್ಲಿ 1998 ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆ. ಆ ಸಂದರ್ಭ ನ್ಯಾಯಾಲಯ ಅಕ್ರಮ ಸಕ್ರಮಕ್ಕೆ ಮತ್ತೆ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣ ಇತ್ಯರ್ಥಕ್ಕೆ ಸೂಚಿಸಿತ್ತೆಂದು ಪ್ರಕರಣದ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು.
ನ್ಯಾಯಾಲಯದಲ್ಲಿ ಜಾಗದ ಪ್ರಕರಣ ಇತ್ಯರ್ಥಕ್ಕೂ ಮೊದಲೇ ಜು.7 ರಂದು ಅರಣ್ಯ ಇಲಾಖೆ ಜಾಗವನ್ನು ತೆರವುಗೊಳಿಸಿದೆ. ಕೃಷಿಭೂಮಿಯನ್ನು ಮತ್ತೆ ದೊರಕಿಸಿಕೊಡುವ ಮೂಲಕ ನನಗೆ ನ್ಯಾಯ ಒದಗಿಸಬೇಕೆಂದು ಭೋಜರಾಜ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಲಕ್ಷ್ಮಣ ಶೆಟ್ಟಿ ಉಪಸ್ಥಿತರಿದ್ದರು.