ಬೆಂಗಳೂರು ಜು.19 : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಐವರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದು, ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ. ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಇಂದು ಬೆಳಗ್ಗೆ ಕರ‍್ಯಾಚರಣೆ ನಡೆಸಿತು.
ಬಂಧಿತರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ಪೊಲೀಸರು ತಪ್ಪಿಸಿದ್ದಾರೆ. ಏಳು ಪಿಸ್ತೂಲ್, 45 ಮದ್ದು ಗುಂಡುಗಳು, ಹನ್ನೆರಡು ಬೇಸಿಕ್ ಸೆಟ್ ಮೊಬೈಲ್ ಫೋನ್, ಡ್ರ್ಯಾಗರ್, ವಾಕಿ ಟಾಕಿ ವಶಕ್ಕೆ ಪಡೆಯಲಾಗಿದೆ. ಬಂಧಿತರು ಬೆಂಗಳೂರು ನಗರದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಕೃತ್ಯಗಳಿಗೆ ವಿದೇಶದಿಂದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಹಾಗೂ ಜಾಹಿದ್ ಬಂಧಿತರೆಂದು ಗುರುತಿಸಲಾಗಿದೆ.