ಮಡಿಕೇರಿ ಜು.19 : ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭೇಟಿ ನೀಡಿದರು.
ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆ ಬಗ್ಗೆ ಮಾಹಿತಿ ಪಡೆದ ಅಖಿಲೇಶ್ ಯಾದವ್, ತಿಮ್ಮಯ್ಯ ಅವರ ಅಪ್ರತಿಮ ಸೇನಾ ಸೇವೆ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.
ಮೈಸೂರಿನಲ್ಲಿ ವಿಧ್ಯಾಭ್ಯಾಸ ಪಡೆದಿದ್ದೆ. ಹೀಗಾಗಿ ಆಗಾಗ್ಗೆ ಕೊಡಗಿಗೆ ಭೇಟಿ ನೀಡುತ್ತಿದ್ದೆ. ಮಡಿಕೇರಿಯ ದಸರಾ ಉತ್ಸವಕ್ಕೂ ಭೇಟಿ ನೀಡಿದ್ದೇನೆ. ಬಹಳ ಸುಂದರವಾದ ಜಿಲ್ಲೆ ಇದಾಗಿದೆ ಆದರೆ ಇದೇ ಮೊದಲ ಬಾರಿಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿರುವೆ. ಸೇನೆಯಲ್ಲಿರುವ ಕೊಡಗಿನ ಸೈನಿಕರ ಸಾಹಸಗಾಥೆಯನ್ನು ಸೈನಿಕಶಾಲೆಯಲ್ಲಿ ಓದುತ್ತಿರುವ ಸಂದಭ೯ ಸಹಪಾಠಿಗಳಿಂದ ಕೇಳಿತಿಳಿದಿದ್ದೆ. ಆದರೆ ಭಾರತದ ಪಾಲಿಗೆ ಮಹಾನ್ ಸೇನಾಧಿಕಾರಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಜೀವನ, ಸೇನಾ ಸಾಧನೆಗಳ ಬಗ್ಗೆ ಪ್ರತ್ಯಕ್ಷವಾಗಿ ವಸ್ತುಸಂಗ್ರಹಾಲಯದಲ್ಲಿ ವೀಕ್ಷಿಸಿ ಸಂತೋಷವಾಗಿದೆ. ವಿದೇಶಗಳಲ್ಲಿಯೂ ಭಾರತದ ಕೀತಿ೯ಪತಾಕೆ ಹಾರಿಸಿರುವ ತಿಮ್ಮಯ್ಯ ಅವರ ಜನ್ಮನಿವಾಸದಲ್ಲಿಯೇ ಆ ಮಹಾನ್ ಸೇನಾನಿಗೆ ಗೌರವ ನಮನ ಸಲ್ಲಿಸುವ ಅಪೂವ೯ ಅವಕಾಶ ನನ್ನದಾಗಿದೆ ಎಂದರು.
ಉತ್ತಮ ರೀತಿಯಲ್ಲಿ ವಸ್ತುಸಂಗ್ರಹಾಲಯ ನಿವ೯ಹಿಸಲ್ಪಟ್ಟಿದೆ. ಇಂಥ ವಸ್ತು ಸಂಗ್ರಹಾಲಯವನ್ನು ದೇಶದ ಮಹಾನ್ ಸೇನಾನಿ ಸ್ಮಾರಕವಾಗಿ ರೂಪಿಸಿದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದಭ೯ ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧುರಿ ಹಾಜರಿದ್ದರು. ಮ್ಯೂಸಿಯಂ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮ್ಯೂಸಿಯಂ ಬಗ್ಗೆ ಯಾದವ್ ಅವರಿಗೆ ಸಮಗ್ರ ಮಾಹಿತಿ ನೀಡಿದರು.
ಅಖಿಲೇಶ್ ಯಾದವ್ ಭೇಟಿ ಹಿನ್ನಲೆಯಲ್ಲಿ ತಿಮ್ಮಯ್ಯ ಮ್ಯೂಸಿಯಂ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏಪ೯ಡಿಸಲಾಗಿತ್ತು.