ಮಡಿಕೇರಿ ಜು.19 : ಬೆಟ್ಟಗೇರಿ ಗ್ರಾಮ ಪಂಚಾಯ್ತಿಯ ಅರ್ವತ್ತೊಕ್ಲು ಗ್ರಾಮದಲ್ಲಿ ಬೇಕೋಟ್ ಮಕ್ಕ ಕ್ಲಬ್ ವತಿಯಿಂದ ಜು.23 ರಂದು ತೃತೀಯ ವರ್ಷದ ಹಿಂದು ಬಾಂಧವರ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆಯೆಂದು ಕ್ಲಬ್ ಸಲಹೆಗಾರರಾದ ಕಡ್ಲೇರ ಕೀರ್ತನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ವತ್ತೊಕ್ಲು ಗ್ರಾಮದ ತಳೂರು ಎಂ.ಚಂಗಪ್ಪ ಮತ್ತು ತಳೂರು ಎಂ.ಕುಶಾಲಪ್ಪನವರ ಗದ್ದೆಯಲ್ಲಿ ವೈವಿಧ್ಯಮಯವಾದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟಕ್ಕೆ ಬೆಳಗ್ಗೆ 8 ಗಂಟೆಗೆ ಸಂಸದ ಪ್ರತಾಪ ಸಿಂಹ ಮತ್ತು ಸ್ಥಳ ದಾನಿಗಳಾದ ತಳೂರು ಎಂ.ಚಂಗಪ್ಪ, ತಳೂರು ಎಂ.ಕುಶಾಲಪ್ಪ ಮತ್ತು ತಳೂರು ಜಿ. ದೇವರಾಜ್ ಅವರು ಚಾಲನೆ ನೀಡಲಿದ್ದು, ಹಲ ಗಣ್ಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತದೆಂದು ಹೇಳಿದರು.
ಸ್ಪರ್ಧೆಗಳು- ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ತಲಾ 16 ತಂಡಗಳಿಗೆ ಸೀಮಿತವಾಗಿ ಪುರುಷರ ಕ್ರಿಕೆಟ್, ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತ ತಂಡಗಳು ಜು.21 ರ ಸಂಜೆ 5 ಗಂಟೆಯ ಒಳಗಾಗಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕ್ರಿಕೆಟ್ ಪಂದ್ಯಾವಳಿಗೆ ಪ್ರವೇಶ ಶುಲ್ಕವನ್ನು 2 ಸಾವಿರ ರೂ. ಪುರುಷರ ಹಗ್ಗಜಗ್ಗಾಟಕ್ಕೆ 1500 ರೂ. ಮತ್ತು ಮಹಿಳೆಯರ ವಿಭಾಗದ ಹಗ್ಗಜಗ್ಗಾಟಕ್ಕೆ ಪ್ರವೇಶ ಶುಲ್ಕವಾಗಿ 1 ಸಾವಿರ ರೂ.ಗಳನ್ನು ನಿಗದಿ ಪಡಿಸಲಾಗಿದೆಯೆಂದು ಮಾಹಿತಿ ನೀಡಿದರು.
ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಬಾಲಕ, ಬಾಲಕಿಯರನ್ನು ಒಳಗೊಂಡಂತೆ, ಸಾರ್ವಜನಿಕ ಪುರುಷರು, ಮಹಿಳೆಯರಿಗಾಗಿ ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಗಳಿಗೆ ಸ್ಥಳದಲ್ಲೆ ನೋಂದಣಿ ಮಾಡಿಕೊಳ್ಳಲಾಗುವುದೆಂದು ವಿವರಗಳನ್ನಿತ್ತರು.
ಮನೋರಂಜನಾ ಕ್ರೀಡೆ : ಕ್ರೀಡಾಕೂಟದಲ್ಲಿ ತುಳು ನಾಡು ಸಂಸ್ಕೃತಿಯ ಭಾಗವಾಗಿರುವ ಗೂಟದ ಓಟ, ದಂಪತಿಗಳಿಗೆ ಕೆಸರು ಗದ್ದೆಯಲ್ಲಿ ಅಡಿಕೆ ಹಾಳೆಯಲ್ಲಿ ಎಳೆಯುವ ವಿಶಿಷ್ಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲಾ ಸ್ಪರ್ಧೆಗಳಿಗೂ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತದೆಂದು ಸ್ಪಷ್ಟಪಡಿಸಿದರು.
ಇವರನ್ನು ಸಂಪರ್ಕಿಸಿ- ಕ್ರೀಡಾ ಕೂಟದಲ್ಲಿ ತಂಡಗಳ ಹೆಸರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜೀತು ತಳೂರು ಮೊ.7349527337, ಮೋಹನ್ ಕುಶಾಲಪ್ಪ ತಳೂರು ಮೊ.8197082819 ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಸಮಾರೋಪ : ಸಮಾರೋಪ ಸಮಾರಂಭ ಅಂದು ಸಂಜೆ 4 ಗಂಟೆಗೆ ಕ್ಲಬ್ ಅಧ್ಯಕ್ಷರಾದ ತಳೂರು ಎಸ್.ವಿವೇಕ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಕೆಸರು ಗದ್ದೆ ಕ್ರೀಡಾ ಕೂಟದ ನಿರೂಪಕರಾಗಿ ರೇಡಿಯೋ ಜಾಕಿ ಆರ್ಜೆ ತ್ರಿಶೂಲ್ ಅವರು ಆಗಮಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ನ ಅಧ್ಯಕ್ಷರಾದ ತಳೂರು ಎಸ್.ವಿವೇಕ್, ಉಪಾಧ್ಯಕ್ಷರಾದ ತಳೂರು ಚಂದ್ರಶೇಖರ್, ಕಾರ್ಯದರ್ಶಿ ತಳೂರು ಗಿರಿಯಪ್ಪಯ್ಯ, ಜಂಟಿ ಕಾರ್ಯದರ್ಶಿ ತಳೂರು ಮನೋಜ್ ಅಚ್ಚಯ್ಯ ಹಾಗೂ ನಿರ್ದೇಶಕ ಅನಿಲ್ ಪಾಂಡುರಂಗ ಉಪಸ್ಥಿತರಿದ್ದರು.








