ಮಡಿಕೇರಿ ಜು.19 : ಪ್ರಸಕ್ತ (2023-24) ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಲ್ಲಿ ತಾಳೆ ಬೆಳೆಯನ್ನು ತೋಟಗಾರಿಕಾ ಇಲಾಖಾ ಪಾಲುದಾರ ಕಂಪನಿಯಾದ ಪತಂಜಲಿ ಫುಡ್ಸ್ ಲಿಮಿಟೆಡ್ ಅವರೊಂದಿಗೆ ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಅದರಂತೆ ತಾಳೆ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಒಂದು ಹೆಕ್ಟೇರ್‍ಗೆ 143 ಉತ್ಕೃಷ್ಟ ಗುಣ ಮಟ್ಟದ ತಾಳೆ ಸಸಿಗಳು ಬೇಸಾಯ ಹಾಗೂ ಇತರೆ ವೆಚ್ಚ ಸೇರಿ ರೂ.20 ಸಾವಿರ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ಮುಂದಿನ ಮೊದಲನೇ, ಎರಡನೇ, ಮೂರನೇ ಹಾಗೂ ನಾಲ್ಕನೇ ವರ್ಷದ ಪಾಲನೆಗೆ ರೂ.5,250 ಪ್ರತಿ ಹೆಕ್ಟೇರ್‍ಗೆ ಸಹಾಯಧನ ನೀಡಲಾಗುವುದು. ಇದರ ಜೊತೆಗೆ ತಾಳೆ ಕಟಾವು ಯಂತ್ರ, ಡಿಸೇಲ್ ಪಂಪ್‍ಸೆಟ್ ಖರೀದಿಗೆ ಶೇ.50ರ ಸಹಾಯಧನ ಹಾಗೂ ಅಂತರ ಬೇಸಾಯ ಕೈಗೊಂಡಿದ್ದಲ್ಲಿ ಹೆಕ್ಟೇರ್‍ಗೆ ರೂ. 5 ಸಾವಿರ ಸಹಾಯಧನ ನೀಡಲಾಗುತ್ತದೆ.
ಆಸಕ್ತ ರೈತರು ನಿಗದಿತ ಅರ್ಜಿ ನಮೂನೆ, ಪಹಣೆ (ಆರ್‍ಟಿಸಿ) ಆಧಾರ್ ಕಾರ್ಡ್ ಹಾಗೂ ಮತ್ತಿತರ ದಾಖಲಾತಿಗಳನ್ನು ಆಯಾಯ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಜುಲೈ, 31 ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. ಜೇಷ್ಠತಾ ಪಟ್ಟಿ ಆಧಾರದ ಮೇಲೆ ಸರ್ಕಾರದ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು, ವಿಕಲಚೇತನರಿಗೆ ಆದ್ಯತೆ ನೀಡಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕರಾದ ಎಚ್.ಆರ್.ನಾಯಕ್ ತಿಳಿಸಿದ್ದಾರೆ.









