ಮಡಿಕೇರಿ ಜು.20 : ಕರ್ನಾಟಕ ಸರ್ಕಾರವು 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕೊಡಗು ಜಿಲ್ಲೆಗೆ ಕಾಳುಮೆಣಸು ಹಾಗೂ ಅಡಿಕೆ ಬೆಳೆಗೆ ವಿಮಾ ಘಟಕವನ್ನು ಅಧಿಸೂಚಿಸಲಾಗಿದೆ.
ಹವಾಮಾನ ಆಧಾರಿತ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಮತ್ತಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.
2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಕಾಳುಮೆಣಸು ಬೆಳೆಗೆ ಒಟ್ಟು ರೂ.47 ಸಾವಿರ ಹಾಗೂ ಅಡಿಕೆ ಬೆಳೆಗೆ ರೂ.1,28,000 ಆಗಿದೆ. ವಿಮಾ ಕಂಪನಿಗೆ ಒಟ್ಟು ವಿಮಾ ಮೊತ್ತಕ್ಕೆ ರೈತರು ಕಾಳುಮೆಣಸು ಬೆಳೆಗೆ ಶೇ.5 ರ ವಿಮಾ ಮೊತ್ತ ರೂ. 2350 ಹಾಗೂ ಅಡಿಕೆ ಬೆಳೆಗೆ ರೂ. 6400 ಪ್ರತಿ ಹೆಕ್ಟೇರ್ ಪಾವತಿಸಬೇಕಿದೆ. ವಿಮಾ ನೋಂದಣಿಗೆ ಜುಲೈ, 31 ಕೊನೆ ದಿನವಾಗಿದೆ.
ತೋಟಗಾರಿಕೆ ಬೆಳೆಗಳ ವಿಮಾ, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ಹಾಗೂ ಅನ್ವಯಿಸುವ ಅವಧಿಯ ವಿವರ ಇಂತಿದೆ: ಕಾಳು ಮೆಣಸು ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 47 ಸಾವಿರ, ರೈತರು ಪಾವತಿಸಬೇಕಾಗಿರುವ ಪ್ರೀಮಿಯಂ ಮೊತ್ತ(ಶೇ.5) 2,350, ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ ರೂ.1,28,000, ರೈತರು ಪಾವತಿಸಬೇಕಾಗಿರುವ ಪ್ರೀಮಿಯಂ ಮೊತ್ತ(ಶೇ.5) ರೂ.6,400 ಆಗಿದೆ. ವಿಮಾ ಅನ್ವಯಿಸುವ ಅವಧಿ 2023 ರ ಆಗಸ್ಟ್, 1 ರಿಂದ 2024 ರ ಜುಲೈ, 31 ರವರೆಗೆ ಅನ್ವಯಿಸುತ್ತದೆ. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಮೊತ್ತವು ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿದೆ.
ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದ ರೈತರು ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿಮೆ ಮಾಡಿಸಲು ಇಚ್ಚಿಸುವ ರೈತರು ನಿಗಧಿತ ಅರ್ಜಿಯೊಂದಿಗೆ ಪಹಣಿ ಪತ್ರ, ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಹತ್ತಿರದ ಬ್ಯಾಂಕ್‍ನಲ್ಲಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನಗೊಳಿಸಲು ಕೊಡಗು ಜಿಲ್ಲೆಗೆ ಕ್ಷೇಮಾ ಜನರಲ್ ವಿಮಾ ಸಂಸ್ಥೆಯು ಹಂಚಿಕೆಯಾಗಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಬ್ಯಾಂಕ್ ಶಾಖೆ, ಕ್ಷೇಮಾ ಜನರಲ್ ವಿಮಾ ಸಂಸ್ಥೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮಡಿಕೇರಿ ಮೊ.ನಂ.9945303149, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸೋಮವಾರಪೇಟೆ ಮೊ.ನಂ.8762622424, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪೊನ್ನಂಪೇಟೆ ಮೊ.ನಂ.9448049020, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಸಾಮಾನ್ಯ ಸೇವಾ ಕೇಂದ್ರ ಹಾಗೂ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಮಡಿಕೇರಿ, ಕೊಡಗು ಮೊ.ನಂ. 9448999227 ನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್ ಅವರು ತಿಳಿಸಿದ್ದಾರೆ.










