ಮಡಿಕೇರಿ ಜು.21 : ನಾಪೋಕ್ಲು ಸಮೀಪದ ಮರಂದೋಡ ಗ್ರಾಮದ ಭಾಗದಲ್ಲಿ ಗುರುವಾರ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಮರ ಮುರಿದುಬಿದ್ದು 3-4 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.
ಮರ ಮುರಿದು ಬಿದ್ದ ಪರಿಣಾಮ ಕೆರೆತಟ್ಟು ಸಂಪರ್ಕ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಗ್ರಾಮಸ್ಥರಾದ ಬಾಲಕೃಷ್ಣ ಹಾಗೂ ಕೆ.ಕೆ.ಗಿರೀಶ್, ಸಿ.ಹರೀಶ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಒಗ್ಗೂಡಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತ ಉಂಟಾಗಿ ಗ್ರಾಮಸ್ಥರು ಕತ್ತಲೆಯಲ್ಲಿ ಕಳೆಯುವಂತಾಗಿದೆ. ಗ್ರಾ.ಪಂ ಸದಸ್ಯ ಹರೀಶ್ ಮೊಣ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಸೆಸ್ಕ್ ಇಲಾಖೆಯ ಎಂಜಿನಿಯರ್ ಅವರನ್ನು ಸಂಪರ್ಕಿಸಿ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ವರದಿ : ದುಗ್ಗಳ ಸದಾನಂದ