ಮಡಿಕೇರಿ ಜು.21 : ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಭಾರೀ ಗಾಳಿ ಬೀಸುತ್ತಿದೆ. ಇದರ ಪರಿಣಾಮ ಮರಗಳು ಬಿದ್ದು ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ನಿವಾಸದ ಹಿಂಭಾಗ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ 3 ದ್ವಿಚಕ್ರ ವಾಹನಗಳು ಮರದಡಿಯಲ್ಲಿ ಸಿಲುಕಿಕೊಂಡವು. ಆದರೆ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ. ಅರಣ್ಯ ಇಲಾಖೆ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರವನ್ನು ಸುಗಮಗೊಳಿಸಿತು.
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯತಿಗೆ ಸೇರಿದ 7ನೇ ಮೈಲು ವಿಕ್ರಂ ಬಡಾವಣೆಯ ನಿವಾಸಿ ವಸಂತಿ ಎಂಬುವರ ಮನೆಯ ಮೇಲೆ ಭಾರಿ ಗಾತ್ರದ ಮರ ಮುರಿದು ಬಿದ್ದು ಹಾನಿ ಸಂಭವಿಸಿದೆ. ಶುಕ್ರವಾರ ಮುಂಜಾನೆ 3.30 ಗಂಟೆಯ ವೇಳೆಗೆ ಭಾರಿ ಗಾಳಿಗೆ ಬೀಟೆ ಮರವೊಂದು ಮುರಿದು ಬಿದ್ದಿದೆ. ಮರ ಬಿದ್ದ ಪರಿಣಾಮ ಅಡುಗೆ ಕೋಣೆ ಮತ್ತು ಶೌಚಾಲಯಕ್ಕೆ ಹಾನಿಯಾಗಿದೆ. ಮನೆಯ ಪಕ್ಕ ನಿಲ್ಲಿಸಿದ್ದ ಕಾರು ಅಲ್ಪ ಪ್ರಮಾಣದಲ್ಲಿ ಜಖಂಗೊಂಡಿದೆ. ಸ್ಥಳಕ್ಕೆ ನಾಡ ಕಚೇರಿ ಗ್ರಾಮ ಲೆಕ್ಕಿಗ ಜಯಂತ್, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.









