ಮಡಿಕೇರಿ ಜು.21 : ಮನೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಲ್ಯಮಂಡೂರು ಗ್ರಾ.ಪಂ ವ್ಯಾಪ್ತಿಯ ಕೊಡ್ಚೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಾಚಿಮಾಡ ಡಿ.ಮಾಚಯ್ಯ ಎಂಬುವವರ ಮನೆ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ.
ಶುಕ್ರವಾರ ನಸುಕಿನ 3.15 ಗಂಟೆಗೆ ಗುಂಡಿನ ದಾಳಿ ನಡೆಸಲಾಗಿದ್ದು, ಮನೆಯ ಬಲಭಾಗದ ಕಿಟಿಕಿಗೆ 2 ಗುಂಡುಗಳು ತಗುಲಿವೆ. ಕಿಟಕಿಯ ಗಾಜುಗಳು ಒಡೆದಿದ್ದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಟ್ಟ ವೃತ್ತ ನಿರೀಕ್ಷಕ ಮತ್ತು ಶ್ರೀಮಂಗಲ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.









