ಮಡಿಕೇರಿ ಜು.22 : ಕೊಡಗು ಜಿಲ್ಲೆಯಲ್ಲಿ ತಡವಾಗಿ ಆರಂಭಗೊಂಡ ಮುಂಗಾರು ಬಿರುಸುಗೊಂಡಿದೆ. ಸತತ ಗಾಳಿ, ಮಳೆಯಾಗುತ್ತಿರುವುದರಿಂದ ಮರ, ಬರೆ ಮತ್ತು ವಿದ್ಯುತ್ ಕಂಬಗಳು ಬಿದ್ದು ಹಾನಿಯುಂಟಾಗಿದೆ.
ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರ ವ್ಯಾಪ್ತಿ ಸೇರಿದಂತೆ, ಕಾವೇರಿ ನದಿ ಹರಿವಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಹೆಚ್ಚಳವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಎಡೆಬಿಡದೆ ಗಾಳಿ ಮಳೆಯಾಗುತ್ತಿದ್ದು, ಮುಸುಕಿದ ಮಂಜು ಮತ್ತು ಮೈಕೊರೆಯುವ ಚಳಿಯ ವಾತಾವರಣವಿದೆ.
::: ವಿವಿಧೆಡೆ ಹಾನಿ :::
ಗಾಳಿ ಮಳೆಗೆ ಸುಂಟಿಕೊಪ್ಪ ಮತ್ತು ಸಮೀಪದ ಮಟತ್ ಕಾಡುವಿನಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ. ನಾಕೂರು ಶಿರಂಗಾಲ ಗ್ರಾ.ಪಂ ವ್ಯಾಪ್ತಿಯಲ್ಲಿ ಮರ ಬಿದ್ದು, ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ನಗರದ ಅರಣ್ಯ ಭವನದ ಬಳಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ವಿವಿಧೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು.
ಕೊಡಗಿನ ಗಡಿ ಕರಿಕೆ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ, ಭಾಗಮಂಡಲ-ಕರಿಕೆ ನಡುವಿನ ರಸ್ತೆಯ ಹಲವೆಡೆಗಳಲ್ಲಿ ಬರೆ ಕುಸಿತದೊಂದಿಗೆ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು.
ಭಾಗಮಂಡಲ-ಕರಿಕೆ ರಸ್ತೆ ನೆರೆಯ ಕೇರಳ ರಾಜ್ಯವನ್ನು ಸಂಪರ್ಕಿಸುವ ರಸ್ತೆಯೂ ಆಗಿದ್ದು, ಬರೆ ಹಾಗೂ ಮರಗಳನ್ನು ತೆರವುಗೊಳಿಸಲಾಗಿದೆ. ಆದರೆ ರಸ್ತೆ ತುಂಬಾ ನೀರು ಹರಿಯುತ್ತಿದ್ದು, ವಾಹನಗಳ ಚಾಲಕರು ಜಾಗರೂಕತೆಯಿಂದ ಸಂಚರಿಸಬೇಕಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಕೊಡಗ್ಲಿಪೇಟೆಯ ದೊಡ್ಡಕೊಡ್ಲಿ ಗ್ರಾಮದ ಸೋಮಯ್ಯ ಎಂಬವರ ಮನೆಯ ಪಾಶ್ರ್ವ ಕುಸಿದು ಹಾನಿಯಾದ ಘಟನೆ ನಡೆದಿದೆ.
ದಕ್ಷಿಣ ಕೊಡಗಿನ ಬಿರುನಾಣಿ -ಹುದಿಕೇರಿ ನಡುವೆ ಪೊರಾಡು-ಹೈಸೊಡ್ಲೂರು ಸಂಪರ್ಕ ರಸ್ತೆಯ ಕಕ್ಕಟ್ಟ್ ಪೊಳೆ ನದಿ ಸೇತುವೆ ಸಮೀಪ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದು ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ನಡೆದಿದೆ.
ಈ ಮಾರ್ಗದ ಮೂಲಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳು ಬದಲಿ ಮಾರ್ಗದ ಮೂಲಕ ದೇವಸ್ಥಾನಕ್ಕೆ ತೆರಳುವಂತಾಯಿತು.
ಭಾರೀ ಗಾಳಿ ಮಳೆಗೆ ಮಳೆಗೆ ಮಡಿಕೇರಿ ತಾಲ್ಲೂಕಿನ ಆವಂದೂರು ಗ್ರಾಮದ ಯೋಗೀಶ್ ಎಂಬವರ ಮನೆಯ ಮೇಲೆ ಮರವೊಂದು ಬಿದ್ದು ನಷ್ಟ ಉಂಟಾಗಿರುವ ಘಟನೆ ನಡೆದಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದುದರಿಂದ ಮನೆಯ ಒಂದು ಪಾಶ್ರ್ವಕ್ಕೆ ಹಾನಿಯುಂಟಾಗಿದೆ.
ಅಂತರರಾಜ್ಯ ಹೆದ್ದಾರಿಯಲ್ಲಿ ಧರೆಗುರುಳಿದ ಮರ- ಕರ್ನಾಟಕ-ಕೇರಳ ಅಂತರರಾಜ್ಯ ಹೆದ್ದಾರಿಯ ಕುಟ್ಟ ವಿಭಾಗದಲ್ಲಿ ಭಾರೀ ಗಾಳಿ ಮಳೆಗೆ ಹಲ ಮರಗಳು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಕುಟ್ಟ ಪೊಲೀಸರು ಮತ್ತು ಪೊನ್ನಂಪೇಟೆ ಅರಣ್ಯ ವಲಯದ ಸಿಬ್ಬಂದಿಗಳು ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಾಪೋಕ್ಲು ಸಮೀಪದ ಕಕ್ಕಬ್ಬೆ ಗ್ರಾಮದ ನಸೀಮ ಎಂಬವರ ಮನೆಯ ಶೀಟ್‍ಗಳು ಭಾರೀ ಗಾಳಿ ಮಳೆಯ ಸಂದರ್ಭ ಹಾರಿ ಹೋಗಿ ಹಾನಿಯುಂಟಾಗಿರುವ ಘಟನೆಗಳು ವರದಿಯಾಗಿದೆ.