ನಾಪೋಕ್ಲು ಜು.24 : ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಬಿರುಸಿನಿಂದ ಸುರಿಯುತ್ತಿದ್ದು ಜೀವ ನದಿ ಕಾವೇರಿ ಪ್ರವಾಹ ತುಂಬಿ ಬಹುತೇಕ ಕಡೆ ಹಳ್ಳಕೊಳ್ಳಗಳು ಭರ್ತಿಯಾಗಿದೆ. ಕಾವೇರಿ ನದಿತೀರದ ಹಲವು ಗದ್ದೆಗಳು ಜಲಾವೃತವಾಗಿದ್ದು, ನಾಪೋಕ್ಲು, ಬೊಳಿಬಾಣೆ, ಕಕ್ಕಬ್ಬೆ, ಬಲ್ಲಮಾವಟಿ, ಎಮ್ಮೆಮಾಡು, ಬೆಟ್ಟಗೇರಿ. ಪಾಲೂರು ,ಹೊದ್ದೂರು ಬೇತು, ಪಾರಾಣೆ ಗ್ರಾಮದಲ್ಲಿಯ ಗದ್ದೆಗಳಿಗೆ ನೀರು ನುಗ್ಗಿದ್ದು ಜಲಾವೃತವಾಗಿದೆ
ನಾಪೋಕ್ಲು – ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ರಸ್ತೆಯ ಮೇಲೆ ಕಾವೇರಿ ಪ್ರವಾಹದ ಹರಿಯುತ್ತಿದ್ದು ವಾಹನಗಳ ಸಂಚಾರ ಕಡಿದುಕೊಂಡಿದೆ. ಇಲ್ಲಿ ಪೊಲೀಸರು ಬ್ಯಾರಿಕೆಡ್ ಅಳವಡಿಸಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆಯು ಜಲಾವೃತವಾಗಿ ಸಂಪರ್ಕ ಸ್ಥಗಿತಗೊಂಡಿದ್ದು ಸ್ಥಳೀಯ ಯುವಕರ ತುರ್ತು ಸೇವಾ ತಂಡದ ಮೂಲಕ ತೆಪ್ಪ ಬಳಸಿಕೊಂಡು ಸಾರ್ವಜನಿಕರಿಗೆ ಸಹಕರಿಸುತ್ತಿದ್ದಾರೆ. ಹೊದ್ದೂರು ಗ್ರಾಮದ ಬಲಮುರಿಯಲ್ಲಿ ಹಳೆಯ ಸೇತುವೆ ಮುಳುಗಡೆಯಾಗಿ ಗ್ರಾಮಸ್ಥರು ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾಳಿ ಮಳೆಯಿಂದಾಗಿ ಕುಂಜಿಲ ಗ್ರಾಮದ ಮಕ್ಕಿ ಉಮ್ಮರ್ ಅವರ ವಾಸದ ಮನೆಯ 8 ಶೀಟ್‍ಗಳಿಗೆ ಹಾನಿಯಾಗಿದ್ದು, ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಕ್ಕಬೆ ಗ್ರಾಮ ಪಂಚಾಯತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.
ನಾಪೋಕ್ಲುವಿನಲ್ಲಿ 24 ಗಂಟೆಯ ಅವಧಿಯಲ್ಲಿ 5.43 ಇಂಚು ಮಳೆಯಾಗಿದ್ದು, ಜನವರಿಯಿಂದ ಇಂದಿನವರೆಗೆ ಒಟ್ಟು 45.34.ಇಂಚು ಮಳೆ ದಾಖಲಾಗಿದೆ. 2022 ರಲ್ಲಿ ಇದೇ ಅವಧಿಯಲ್ಲಿ 76.48. ಇಂಚು ಮಳೆಯಾಗಿತ್ತು.
ಕಕ್ಕಬೆ ಯಾವಕಪಾಡಿ ಗ್ರಾಮದಲ್ಲಿ 24 ಗಂಟೆ ಅವಧಿಯಲ್ಲಿ 8.75 ಇಂಚು ಮಳೆಯಾಗಿದೆ. ಜನವರಿಯಿಂದ ಇಂದಿನವರೆಗೆ ಒಟ್ಟು 62 ಇಂಚು ಮಳೆ ದಾಖಲಾಗಿದೆ . 2022 ರಲ್ಲಿ ಇದೇ ಅವಧಿಯಲ್ಲಿ 114. ಇಂಚು ಮಳೆಯಾಗಿತ್ತು. ನಾಲಡಿ ಗ್ರಾಮಕ್ಕೆ 276. ಎಂ.ಎಂ.ಬಲ್ಲಮಾವಟ್ಟಿ ಗ್ರಾಮಕ್ಕೆ.152. ಎಂ.ಎಂ. ಹೊದ್ದೂರು ಗ್ರಾಮಕ್ಕೆ 114ಮಿ.ಮಿ. ಮಳೆ ದಾಖಲಾಗಿದೆ.
ವರದಿ : ದುಗ್ಗಳ ಸದಾನಂದ