ನಾಪೋಕ್ಲು ಜು.24 : ಇಂಟರಾಕ್ಟ್ ಕ್ಲಬ್ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲೂ ಸಮಾಜ ಸೇವೆಯ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ರೊಟೇರಿಯನ್ ಬಿ.ಜಿ ಅನಂತಶಯನ ಹೇಳಿದರು.
ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ರ ಸಾಲಿನ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹಂತ ಹಂತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದ ಅವರು ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಅನ್ಯೋನ್ಯವಾಗಿ ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು ಎಂದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿ ಬೋಪಯ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಸಂಘಗಳ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ದೇಶದ ಉತ್ತಮ ಪ್ರಜೆಗಳಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲ ಬಿ.ಎಂ.ಶಾರದ ಮಾತನಾಡಿ, ಶಾಲಾ ಹಂತದಲ್ಲಿ ವಿವಿಧ ಸಂಘಗಳು ಚಟುವಟಿಕೆಗಳಿಂದ ಕೂಡಿದ್ದು, ದೇಶ ವಿದೇಶಗಳಲ್ಲಿ ಇಂಟರಾಕ್ಟ್ ಕ್ಲಬ್ ನಡೆಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ರೋಟೆರಿಯನ್ ಪ್ರಮೋದ್ ಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಜ್ಞಾನ ಮುಂತಾದ ಉತ್ತಮ ಅಂಶಗಳನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಇಂಟರಾಕ್ಟ್ ಕ್ಲಬ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾ ಸಂಯೋಜಕರಾದ ರೊಟೇರಿಯನ್ ಸೋನಾಜಿತ್ ದೇಣಿಗೆಯನ್ನು ನಾಪೋಕ್ಲು ಇಂಟರಾಕ್ಟ್ ಕ್ಲಬ್ ಗೆ ನೀಡಿದರು.
ಕಾರ್ಯಕ್ರಮದಲ್ಲಿ ರೊಟೇರಿಯನ್ ರತ್ನಾಕರ ರೈ ಅವರನ್ನು ಕುಮಾರಿ ದಾಕ್ಷಾಯಿಣಿ ಪಿ. ಎ. ರೊಟೇರಿಯನ್ ಬಿ.ಜಿ. ಅನಂತಶಯನ ಅವರನ್ನು ಕುಮಾರಿ ಸಾನ್ವಿಕ ಕೆ ಎಸ್. ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ತಂಗಮ್ಮಳಲನ್ನು ಕೇತನ್ ಕರುಂಬಯ್ಯ, ಕಾರ್ಯದರ್ಶಿ ವರ್ಷಿಣಿಯನ್ನು ಸಹನಾ ಖಜಾಂಚಿ ಹರ್ಷ ಕಾರ್ಯಪ್ಪ ಅವರನ್ನು ಯು.ಪಿ ಭೋಜಮ್ಮ ಸಭೆಗೆ ಪರಿಚಯಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಕಾರ್ಯದರ್ಶಿ ಬಿದ್ದಾಟಂಡ ಮುದ್ದಯ್ಯ, ನಿರ್ದೇಶಕರಾದ ಅಪ್ಪಾರಂಡ ಎಂ.ಅಪ್ಪಯ್ಯ, ಪ್ರೊ.ಕಲ್ಯಾಟಂಡ ಪೂಣಚ್ಚ, ಬಿದ್ದಾಟಂಡ ಎ.ಮುತ್ತಣ್ಣ, ರೊಟೇರಿಯನ್ ಕುಲ್ಲೇಟಿರ ಅಜಿತ್ ನಾಣಯ್ಯ, ರೊಟೇರಿಯನ್ ಧನಂಜಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವರ್ಷ, ದೀಕ್ಷ ಪ್ರಾರ್ಥನೆ ನೆರವೇರಿಸಿದ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆಶ್ರಿನ್ ಕೆ. ಎ, ನಸೀಮ ಪಿ.ಎ ನಿರೂಪಿಸಿ ಸಮ್ರಾಟಿ ವಂದಿಸಿದರು.
ವರದಿ : ದುಗ್ಗಳ ಸದಾನಂದ