ಮಡಿಕೇರಿ ಜು.24 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಜು.31 ರಂದು ಮಡಿಕೇರಿಯಲ್ಲಿರುವ ಪತ್ರಿಕಾ ಭವನದಲ್ಲಿ ಒಂದು ಪ್ರೇಮ ಕಥೆ ನಾಟಕ ಪ್ರದರ್ಶನಗೊಳ್ಳಲಿದೆ.
ಅಂದು ಸಂಜೆ 7 ಗಂಟೆಗೆ ಸರಿಯಾಗಿ ನಾಟಕ ಪ್ರದರ್ಶನ ಪ್ರಾರಂಭವಾಗಲಿದೆ. ಸಾರ್ವಜನಿಕರಿಗೆ ನಾಟಕ ವೀಕ್ಷಿಸಲು ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಪ್ರದರ್ಶನ ಪ್ರಾರಂಭವಾಗುವ 10 ನಿಮಿಷ ಮುಂಚಿತವಾಗಿ ಪ್ರೇಕ್ಷಕರು ಆಗಮಿಸಬೇಕೆಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ರೆಜಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿಂಬರ್ಲಿ ಕೂರ್ಗ್ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ರಂಗಪಯಣ ತಂಡದಿಂದ ನಾಟಕ ಪ್ರದರ್ಶನಗೊಳ್ಳಲಿದೆ. 55 ನಿಮಿಷದ ಅವಧಿಯಲ್ಲಿ ಕಲಾವಿದ ಭರತ್ ಅಕಿರಾ ಅಭಿನಯಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಉಸ್ತಾದ್ ಜಸ್ಮಿಲಾ ಖಾನ್ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ರಾಜ್‍ಗುರು ರಚನೆ, ಸಂಗೀತದೊಂದಿಗೆ ನಿರ್ದೇಶನ ಮಾಡಿದ್ದಾರೆ. ರಂಗಪಯಣ ತಂಡದ 14ನೇ ವರ್ಷದ ಸಂಭ್ರಮ ಪ್ರಯುಕ್ತ ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ನಾಟಕ ಪ್ರದರ್ಶನಗೊಳ್ಳಲಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಮಾಡುವ ಉದ್ದೇಶದಿಂದ 31 ಸ್ಥಳದಲ್ಲಿ ಏಕಕಾಲದಲ್ಲಿ ನಾಟಕ ಪ್ರದರ್ಶನಗೊಳ್ಳುತ್ತಿದೆ ಎಂದು ತಂಡದ ನಿರ್ವಹಣೆ ಮಾಡುತ್ತಿರುವ ರಂಗಭೂಮಿ ಕಲಾವಿದೆ ನಯನ ಸೂಡ ತಿಳಿಸಿದ್ದಾರೆ.
ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಆಡಗೂರು ವಿಶ್ವನಾಥ್, ವಾಣಿಜ್ಯೋದ್ಯಮಿ ಕೆ.ಎಂ.ಬಿ. ಗಣೇಶ್, ಹಿರಿಯ ಕಲಾವಿದ ನೆರವಂಡ ಉಮೇಶ್, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ. ಪೂವಯ್ಯ, ಮಹಾಪೋಷಕ ಜಿ.ರಾಜೇಶ್, ಗೌರವಾಧ್ಯಕ್ಷೆ ಬಿ.ಆರ್. ಸವಿತಾ ರೈ, ಕಾರ್ಯಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‍ಕುಮಾರ್, ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ.









