ಮಡಿಕೇರಿ ಜು.24 : ಕೊಡಗು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ಗಳನ್ನು ನಿಯೋಜಿಸುವ ಮೂಲಕ ಗ್ರಾಮಸ್ಥರಿಗೂ “ಶಕ್ತಿ” ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಮಡಿಕೇರಿ ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಬೆಳ್ಳಿಯಪ್ಪ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಡಿಕೇರಿ ಡಿಪೋದ ವ್ಯವಸ್ಥಾಪಕರು ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿದ ಜಿಲ್ಲೆಯಾಗಿದ್ದು, ಗ್ರಾಮೀಣ ಪ್ರದೇಶಗಳು ಹೆಚ್ಚು ಇವೆ. ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಮೂಲಕ ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಸೇವೆಯನ್ನು ಒದಗಿಸಿದ್ದು, ರಾಜ್ಯದ ಲಕ್ಷಾಂತರ ಮಹಿಳೆಯರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಕೊಡಗು ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಇದಕ್ಕೆ ಕಾರಣ ಗ್ರಾಮೀಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗಳ ಸೇವೆ ಇಲ್ಲದೆ ಇರುವುದು. ಕೊಡಗಿನ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಬಡ ಮಹಿಳೆಯರಿದ್ದಾರೆ, ಉದ್ಯೋಗಸ್ಥರಿದ್ದಾರೆ, ವಿದ್ಯಾರ್ಥಿನಿಯರಿದ್ದಾರೆ. ಇವರಿಗೆಲ್ಲ ಶಕ್ತಿ ಯೋಜನೆ ಹೆಚ್ಚು ಸಹಕಾರಿಯಾಗುತ್ತದೆ. ಆದರೆ ಕೆಎಸ್‌ಆರ್‌ಟಿಸಿ ಬಸ್ ಗಳ ಅಲಭ್ಯತೆಯಿಂದ ಗ್ರಾಮಸ್ಥರು ಆಟೋರಿಕ್ಷಾ ಮತ್ತು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದು, ಆರ್ಥಿಕ ಹೊರೆಯನ್ನು ಎದುರಿಸುತ್ತಿದ್ದಾರೆ.
ಖಾಸಗಿ ಬಸ್ ಗಳು ನಷ್ಟದ ಕಾರಣ ನೀಡಿ ಅನೇಕ ಕುಗ್ರಾಮಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿಲ್ಲ. ಆದ್ದರಿಂದ ತುರ್ತಾಗಿ ಕೊಡಗಿನ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ಗಳನ್ನು ನಿಯೋಜಿಸಬೇಕು. ಆ ಮೂಲಕ ಉದ್ಯೋಗಸ್ಥ ಮತ್ತು ಸ್ವಾವಲಂಬಿ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಪಾರ್ವತಿ ಫ್ಯಾನ್ಸಿ ಬೆಳ್ಳಿಯಪ್ಪ ಕೋರಿದ್ದಾರೆ.










