ನಾಪೋಕ್ಲು ಜು.24 : ಕಳೆದ ಎರಡು ಮೂರು ದಿನಗಳಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಪುಷ್ಯ ಮಳೆಯ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡರೆ, ಕಾವೇರಿ ನದಿ ನೀರಿನ ಮಟ್ಟ ಹೆಚ್ಚಳವಾಗಿ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಕೊಟ್ಟಮುಡಿ ಜಂಕ್ಷನ್ ಬಳಿ ಜಲಾವೃತಗೊಂಡಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ತಾಲೂಕುವಿನಿಂದ ಅಜ್ಜಿ ಮುಟ್ಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನೂರಂಬಡ ಉದಯ ಶಂಕರ್ ಅವರ ಮನೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಸ್ಥಗಿತಗೊಂಡಿತು. ಗ್ರಾ.ಪಂ ಸದಸ್ಯ ಪ್ರತೀಪ್ ಹಾಗೂ ಜಗದೀಶ್ ತಕ್ಷಣ ಸ್ಥಳಕ್ಕೆ ಧಾವಿಸಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ನಾಪೋಕ್ಲು ಬಳಿಯ ಚೆರಿಯಪರಂಬು, ಕಲ್ಲುಮೊಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ ಮತ್ತೆ ಹೆಚ್ಚಳವಾಗಿದ್ದು, ಗ್ರಾಮದ ಕಾವೇರಿ ನದಿ ದಂಡೆಯ ಪೈಸಾರಿಯಲ್ಲಿ ವಾಸಿಸುವ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಸ್ಥಳೀಯ ಯುವಕರು ತೆಪ್ಪದ ಮೂಲಕ ಜನರನ್ನು ಕೊಂಡೊಯ್ಯುವ ದೃಶ್ಯ ಕಂಡುಬಂದಿದೆ.
ಗ್ರಾಮದಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತಿದ್ದು, ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸೂಚನೆ ನೀಡಿದೆ. ಜನರು ಕಕ್ಕುಂದಕ್ಕಾಡು ರಸ್ತೆಯನ್ನು ಅವಲಂಬಿಸಿ ಪಟ್ಟಣಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಪೋಕ್ಲುವಿನಿಂದ ಬೆಟ್ಟಗೇರಿ ಮಡಿಕೇರಿ ತೆರಳುವ ಕೊಟ್ಟಮುಡಿ ಜಂಕ್ಷನ್ ಬಳಿಯ ಕಾಫಿ ತೋಟಗಳಲ್ಲಿ ಪ್ರವಾಹ ಬಂದಿದ್ದು, ಬೆಟ್ಟಗೇರಿ ಮಡಿಕೇರಿ ರಸ್ತೆ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಸಮೀಪದ ಕೊಳಕೇರಿಯಿಂದ ಕೋಕೇರಿ ಗ್ರಾಮಕ್ಕೆ ತೆರಳುವ ಕುಪ್ಪೋಟು ಹೊಳೆ ತುಂಬಿ ಹರಿಯುತ್ತಿದ್ದು, ಕಕ್ಕಬ್ಬೆ ಕುಂಜಿಲ ಪೈನರಿ ದರ್ಗಾಕ್ಕೆ ಹೋಗುವ ರಸ್ತೆ ಜಲಾವೃತಗೊಂಡಿದೆ. ಸಮೀಪದ ಎಮ್ಮೆಮಾಡು ಗ್ರಾಮದಿಂದ ಕೂರುಳಿ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆ ಬದಿಯ ಗದ್ದೆಗಳಲ್ಲಿ ಕಾವೇರಿ ನದಿ ಹುಕ್ಕಿ ಹರಿಯುತ್ತಿದ್ದು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ನಾಪೋಕ್ಲು ಸುತ್ತಮುತ್ತ ಮಳೆ ಆರ್ಭಟ ಮುಂದುವರಿದಿದ್ದು ವಿಭಾಗದ ಎಲ್ಲಾ ನದಿ ತೊರೆ, ಹಳ್ಳ ಕೊಳ್ಳಗಳು ಹುಕ್ಕಿ ಹರಿಯುತ್ತಿದ್ದು ಕಾವೇರಿ ನದಿಯು ಅಪಾಯದ ಮಟ್ಟ ತಲುಪಿದೆ.
ನಾಪೋಕ್ಲು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬ್ಯಾರಿಗೇಟ್ ಅಳವಡಿಸಿ ಜನರು ಸಂಚರಿಸಿದಂತೆ ಕ್ರಮ ವಹಿಸಲಾಗಿದೆ. (ವರದಿ :ಝಕರಿಯ ನಾಪೋಕ್ಲು)










