ವಿರಾಜಪೇಟೆ ಜು.25 : ಸಮಾಜದಲ್ಲಿ ಗೌರವಯುತವಾದ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಪೋಷಕರು ಶಿಕ್ಷಕರನ್ನೆ ದೇವರು ಎಂದು ಭಾವಿಸಿರುತ್ತಾರೆ. ಶಿಕ್ಷಕರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣಾ ಇಲಾಖೆ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಅನುದಾನಿತ ನೌಕರರ ಸಂಘದ ವತಿಯಿಂದ ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೇಕಡ 100ರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರಿಗೆ, ವಿಷಯ ಬೋಧನಾ ಶಿಕ್ಷಕರಿಗೆ, ದೈಹಿಕ ಶಿಕ್ಷಕರಿಗೆ ಅಭಿನಂದನಾ ಸಮಾರಂಭವನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಉದ್ಘಾಟಿಸಿ ಮಾತನಾಡಿದರು.
ನಾವೇಲ್ಲರೂ ಸಂಬಂಧವನ್ನು ಮರೆತಿದ್ದೇವೆ. ಹಿರಿಯರು ಜಾನಪದದ ನೆಲೆಯಲ್ಲಿ ಈ ನಾಡನ್ನು ಕಟ್ಟಿದ್ದಾರೆ. ಭಾರತ ಭಾವೈಕ್ಯತೆಯನ್ನು ಸಾರಿದ ದೇಶ. ಎಲ್ಲಾ ಧರ್ಮದ ಸಾರವೊಂದೇ ಎಂಬುವುದನ್ನು ಸಾರಿದ ದೇಶ, ಸಂವಿಧಾನ ನಮ್ಮದು, ಜಗದ ಕವಿಯ ಆಶಯದಂತೆ ಈ ನಾಡನ್ನು ಕಟ್ಟಬೇಕು, ನಮ್ಮ ಧರ್ಮವನ್ನು ಪ್ರೀತಿಸುವಷ್ಟೇ ಅನ್ಯ ಧರ್ಮವನ್ನು ಪ್ರೀತಿಸಬೇಕು ಎಂದರು.
ವಿದ್ಯೆಯೊಂದಿಗೆ ಸಂಸ್ಕಾರ ಮುಖ್ಯ, ವಿದ್ಯಾವಂತ ಭ್ರಷ್ಟನಾಗಬಹುದು, ಆದರೆ ಸಂಸ್ಕಾರವಂತ ಎಂದಿಗೂ ಭ್ರಷ್ಟನಾಗಲಾರ. ಕೃಷಿ ಬದುಕು ಏನು ಎಂಬುವುದನ್ನು ತಿಳಿಸಿಕೊಡಬೇಕು. ಶಾಲೆಯ ಶಿಕ್ಷಣದೊಂದಿಗೆ ಜೀವನಪಾಠವೂ ಮುಖ್ಯವಾಗುತ್ತದೆ. ಅದನ್ನು ಶಿಕ್ಷಕರು, ಪೋಷಕರು ಕಲಿಸಬೇಕಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಪರಿಹಾರ ಮಾಡುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವೈದ್ಯರು ರೈತರು ಹಾಗೂ ಯೋಧರು ದೇಶದ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಓದಿನ ಜೊತೆಗೆ ಭವಿಷ್ಯ ರೂಪಿಸಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವ, ಸಮಾಜದ ತಿದ್ದುವ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕಾರಣವಾಗಲಿದೆ ಶಿಕ್ಷಕರು ತಮ್ಮ ಪಾಲಿನ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಕಿವಿಮಾತು ಹೇಳಿದರು
ಪರೀಕ್ಷೆಯಲ್ಲಿ ಅಂಕ ಪಡೆಯುವುದು ಎಷ್ಟು ಮುಖ್ಯವೋ ಹಾಗೆ ಜೀವನದಲ್ಲಿ ಯಶಸ್ಸು ಕೂಡ ಮುಖ್ಯ. ಶಿಕ್ಷಣ ವ್ಯಕ್ತಿಯನ್ನು ಪರಿವರ್ತನೆ ಮಾಡುವುದು ಆಗಿದೆ, ಇದರಲ್ಲಿ ಶಿಕ್ಷಣ, ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪೋತ್ಸಾಹ ನೀಡುವುದರ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಬೇಕು. ಒಂದು ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಮುಂದೆ ತಾನು ಯಾವ ಕ್ಷೇತ್ರದಲ್ಲಿ ಮುಂದುವರೆದು ಸಾಧನೆ ಮಾಡಿದ್ದಾನೆ ಅನ್ನುವುದು ಮುಖ್ಯವಾಗಬೇಕು, ಆ ನಿಟ್ಟಿನಲ್ಲಿ ಶಿಕ್ಷಣ ಸಾಗಬೇಕು ಎಂದು ಹಿತನುಡಿಗಳನ್ನಾಡಿದರು.
ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ 13 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೇ.100 ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕಕರು, ವಿಷಯ ಬೋಧನಾ ಶಿಕ್ಷಕರು ಸೇರಿದಂತೆ 229 ಶಿಕ್ಷಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ಡಾ.ದಯಾನಂದ ಪ್ರಭು, ಸಂತ ಅನ್ನಮ್ಮ ಕಾಲೇಜು ವ್ಯವಸ್ಥಾಪಕರಾದ ರೆ.ಫಾ.ಐಸಾಕ್ ರತ್ನಾಕರ್, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಜಿಲ್ಲಾ ಶಿಕ್ಷಣ ಉಪನಿರ್ಧೆಶಕರಾದ ರಂಗಧಾಮಯ್ಯ, ನಿವೃತ್ತ ಉಪನಿರ್ಧೇಶಕ ಪೆರಿಗ್ರಿನ್ ಮಚ್ಚಾಡೋ, ಶಿಕ್ಷಣ ಇಲಾಖೆಯ ಶೋಭಾ, ಗಾಯತ್ರಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಲಾಲ್ ಕುಮಾರ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ.ಉತ್ತಪ್ಪ, ಅನುದಾನಿತ ನೌಕರರ ಸಂಘದ ಅಧ್ಯಕ್ಷ ಗಿಡ್ಡಯ್ಯ, ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ. ಸೋಮಯ್ಯ ಸೇರಿದಂತೆ ಇತರರು ಇದ್ದರು.



