ಮಡಿಕೇರಿ ಜು.25 : ಕರಿಕೆ ಎಳ್ಳುಕೊಚ್ಚಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಹೊಸಮನೆ ಬಿ.ಚಂಗಪ್ಪ, ಕರಿಕೆ ಗ್ರಾಮದ ಹಲವು ದಿನಗಳ ಬೇಡಿಕೆಗಳಾದ ಮೊಬೈಟ್ ಟವರ್, ಶಾಲಾ ಮಕ್ಕಳಿಗೆ ಶಾಲೆಗೆ ತೆರಳಲು ಸರಕಾರಿ ಬಸ್ ವ್ಯವಸ್ಥೆ, ಕಾಂಞಂಗಾಡ್-ಪಾಣತ್ತೂರು-ಕರಿಕೆ-ಮಡಿಕೇರಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೊಬೈಲ್ ಟವರ್ ನಿರ್ಮಿಸಲು ಪಚ್ಚೆಪಿಲಾವುನಲ್ಲಿ ಸ್ಥಳ ಅಂತಿಮಗೊಳಿಸಲಾಗಿದ್ದು, ತಕ್ಷಣವೇ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಅಲ್ಲದೆ, ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಭಾಗಮಂಡಲ-ಕರಿಕೆ-ಸುಳ್ಯಕ್ಕೆ ಸರಕಾರಿ ಬಸ್ಸನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸದರು. ಅಂತರ್‍ರಾಜ್ಯ ರಸ್ತೆಗೆ ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು, ಕೇಂದ್ರದಿಂದ ನೀಲಿನಕಾಶೆ ಸಿದ್ದಗೊಂಡಿದೆ ಎಂದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕರಿಕೆ ಪ್ರೌಢಶಾಲೆಯಲ್ಲಿ ನಡೆಯುವ ಶಿಕ್ಷಕರ ವರ್ಗಾವಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ಗ್ರಾ.ಪಂ ಸದಸ್ಯ ನಾರಾಯಣ, ಬೂತ್ ಅಧ್ಯಕ್ಷರಾದ ಪಿ.ಎಂ.ನಂಜುಂಡ, ಪ್ರಮುಖರಾದ ಪಿ.ಟಿ.ಐಸಾಕ್, ಬಿ.ಎ.ನಾರಾಯಣ, ಹರೀಶ, ಕೆ.ಜಿ.ರತೀಶ್ ಹಾಜರಿದ್ದರು.