ಮಡಿಕೇರಿ ಜು.25 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿದರು.
ಕೊಂಡಂಗೇರಿ ವಲಯ ಕಾಂಗ್ರೆಸ್ ವತಿಯಿಂದ ಶಾದಿಮಲ್ ನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿರಾಜಪೇಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಮೊದಲ ಗುರಿ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಯನ್ನು ಎಲ್ಲರೂ ಬಳಸಿ, ಸರ್ಕಾರದ ಯೋಜನೆಯ ಲಾಭವನ್ನು ಪಡೆಯಿರಿ. ಎಲ್ಲರೂ ಸಾಮಾಜಿಕ ಭದ್ರತೆ ಹಾಗೂ ಸೌಹಾರ್ದತೆಯಿಂದ ಪರಸ್ಪರ ಅನ್ಯೋನ್ಯತೆಯಿಂದ ಬದುಕಬೇಕು. ಕೊಂಡಂಗೇರಿ ಗ್ರಾಮಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತಾನಡಿದ ಹಾಲುಗುಂದ ಗ್ರಾ.ಪಂ ಸದಸ್ಯ ಅಬ್ದುರಹಮಾನ್ (ಅಂದಾಯಿ) ವಿರಾಜಪೇಟೆ ಕ್ಷೇತ್ರದಲ್ಲಿ 20 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಶಾಸಕರು ಗೆಲುವು ಸಾಧಿಸಲು ಕೊಂಡಂಗೇರಿ ಗ್ರಾಮದ ಜನತೆ ದೊಡ್ಡ ಕೊಡುಗೆ ನೀಡಿದ್ದಾರೆ.
ಪ್ರತೀ ಬಾರಿಯ ಚುನಾವಣೆಯಲ್ಲಿ ಕೊಂಡಂಗೇರಿ ಗ್ರಾಮಸ್ಥರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ.2019 ರಲ್ಲಿ ಕೊಂಡಂಗೇರಿಯಲ್ಲಿ ಕಾವೇರಿ ನದಿ ಪ್ರವಾಹದಿಂದ ಪರಿಹಾರ ಸಿಗದ ಸಂತ್ರಸ್ತರಿಗೆ ಪರಿಹಾರ ನೀಡಲು ಶಾಸಕರು ಕೂಡಲೇ ಕ್ರಮವಹಿಸಬೇಕೆಂದು ಮನವಿ ಮಾಡಿದರು. ಕೊಂಡಂಗೇರಿಯಲ್ಲಿ ರಸ್ತೆ ಸಮಸ್ಯೆ ಹಾಗೂ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಅವಶ್ಯಕತೆ ಇದ್ದು, ಶಾಸಕರು ಇದರ ಬಗ್ಗೆ ಗಮನ ಹರಿಸುವಂತೆ ಹಾಲುಗುಂದ ಗ್ರಾ.ಪಂ ಸದಸ್ಯ ಅಬ್ದುರಹಮಾನ್ (ಅಂದಾಯಿ) ಶಾಸಕರಿಗೆ ಮನವಿ ಮಾಡಿದರು.
ಕೊಂಡಂಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಎಂ ಅಬ್ದುಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಹನೀಫ್ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಅವರನ್ನು ಕೊಂಡಂಗೇರಿ ವಲಯ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಯೂಸುಫ್ ಹಾಜಿ ಕೊಂಡಂಗೇರಿ ಅವರು ಶಾಸಕ ಎ.ಎಸ್ ಪೊನ್ನಣ್ಣ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ವೇದಿಕೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಎಂ ಶಾದುಲಿ, ಗ್ರಾ.ಪಂ ಹಾಲಿ ಅಧ್ಯಕ್ಷೆ ಸೀತೆ ಬೊಳ್ಳಿ, ಉಪಾಧ್ಯಕ್ಷ ದಿನೇಶ್ (ಕುಶ), ಕೊಂಡಂಗೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ ಯೂಸುಫ್ ಹಾಜಿ, ಸಿ.ಎಂ ಹಂಸ, ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಕೊಂಡಂಗೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಝಕರೀಯ, ಕಾಂಗ್ರೆಸ್ ಕಾರ್ಯಕರ್ತರಾದ ಸಮಿರ್ ,ಇಸ್ಮಾಯಿಲ್, ಶಿಯಾಬ್ ಇದ್ದರು.