ಮಡಿಕೇರಿ ಜು.25 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 19 ಪತ್ರಕರ್ತರು ಸೇರಿದ್ದಂತೆ ಒಟ್ಟು 50 ಜನ ರಕ್ತದಾನ ಮಾಡಿದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹುಣಸೂರಿನ ಕಾವೇರಿ ಆಸ್ಪತ್ರೆ, ಕೊಡಗು ಹಿಂದೂ ಮಲಯಾಳಿ ಸಮಾಜ ಪಾಲಿಬೆಟ್ಟ ಉಪಸಮಿತಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರ, ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ವಿವಿಧ ಸಂಘ- ಸಂಸ್ಥೆಗಳ ಸಹಯೋಗ ದೊಂದಿಗೆ ಪಾಲಿಬೆಟ್ಟದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಅಜ್ಜಿನಿಕಂಡ ಶ್ಯಾಮ್‍ಚಂದ್ರ, ದಾನಗಳ ಪೈಕಿ ರಕ್ತದಾನಕ್ಕೆ ಪ್ರಾಮುಖ್ಯತೆ ಹೆಚ್ಚಿದೆ. ರಕ್ತದಾನ ಶಿಬಿರ ಆಯೋಜಿಸಲು ಪತ್ರಕರ್ತರು ನೇತೃತ್ವ ವಹಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಲೋಹಿತ್ ಮಾತನಾಡಿ, ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಇನ್ನೊಬ್ಬರ ಜೀವ ಉಳಿಸುವುದರೊಂದಿಗೆ ವೈಯುಕ್ತಿಕ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಹೇಳಿದರು.
ಅಂಗಾಂಗ ದಾನ ಮಾಡುವುದರ ಮೂಲಕ ಹಲವರ ಜೀವ ಉಳಿಸುವ ಅವಕಾಶವಿದೆ. ದೇಶದಲ್ಲಿ ಶೇ.30 ಕ್ಕಿಂತ ಹೆಚ್ಚಿನ ಜನರಲ್ಲಿ ರಕ್ತಹೀನತೆ ಇರುತ್ತದೆ. ಆದ್ದರಿಂದ ರಕ್ತದಾನ ಮಾಡುವುದು ಅತ್ಯಗತ್ಯ ಎಂದರು.
ನಿಸ್ವಾರ್ಥವಾಗಿ, ಯಾವ ಅಪೇಕ್ಷೆಯೂ ಇಲ್ಲದೆ ಕೊಡಗು ಪ್ರೆಸ್ ಕ್ಲಬ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಆರೋಗ್ಯ ಕ್ಷೇತ್ರ ಬಹಳಷ್ಟು ನಿಗೂಢತೆಯಿಂದ ಕೂಡಿದೆ. ದೇಶದಲ್ಲಿ ನಮ್ಮ ಅರವಿಗೆ ಬಾರದೆ ಸ್ವಾಭಾವಿಕವಾಗಿ ಹಲವಾರು ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಆರೋಗ್ಯ ಸಮಸ್ಯೆ ಎದುರದ್ದಾಗ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಬಹುದೆಂದು ಡಾ.ಲೋಹಿತ್ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಕಾಳಿಮಾಡ ಪಿ. ಕರುಂಬಯ್ಯ ಮಾತನಾಡಿ, ಪ್ರಸ್ತುತ ರಕ್ತದ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಪೂರೈಕೆ ಮಾಡಲು ಸತತ ಪ್ರಯತ್ನ ನಡೆಯುತ್ತಿದೆ. ಸಂಘ- ಸಂಸ್ಥೆಗಳ ಸಹಕಾರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಮೊದಲು ಜಿಲ್ಲೆಯಲ್ಲಿ ತಿಂಗಳಿಗೆ 150 ಯೂನಿಟ್ ರಕ್ತ ಬೇಕಾಗಿತ್ತು. ಈಗ 500 ಯೂನಿಟ್ ರಕ್ತದ ಅಗತ್ಯತೆ ಇದೆ ಎಂದರು.
ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ. ರಕ್ತದಾನದ ಮಹತ್ವ ಕುರಿತು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮೊದಲ ಬಾರಿಗೆ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ಆ ಮೂಲಕ ರಕ್ತದಾನಕ್ಕೆ ಸಂಬಂಧಿಸಿದ್ದಂತೆ ಇರುವ ಭಯ ಮತ್ತು ಮೂಢನಂಬಿಕೆ ದೂರ ಮಾಡಬೇಕೆಂದರು. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣೆ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಡಾ.ಕರುಂಬಯ್ಯ ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ರಕ್ತದ ಅಗತ್ಯತೆ ಹೆಚ್ಚಿದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು. ಜಿಲ್ಲಾಸ್ಪತ್ರೆಯಲ್ಲಿ ರಕ್ತ ಇದ್ದರೂ ನೀಡದೇ ಸತಾಯಿಸಲಾಗುತ್ತದೆ. ಆಸ್ಪತ್ರೆಯಲ್ಲಿ ರಕ್ತದಾನ ಮಾಡಲು ಬಂದಾಗ ಸುಲಭವಾಗಿ ರಕ್ತ ಸ್ವೀಕರಿಸುವಂತಾಗಬೇಕೆಂದು ಹೇಳಿದರು.
ರಕ್ತದಾನ ಮಾಡುವುದು ಕೂಡ ಸಮಾಜ ಸೇವೆ. ರಕ್ತ ನೀಡುವ ಮೂಲಕ ಜೀವ ಉಳಿಸಬಹುದೆಂದು ಪಾಲಿಬೆಟ್ಟದ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಹೇಳಿದರು.
ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಕೆ. ರೆಜಿತ್‍ಕುಮಾರ್ ಮಾತನಾಡಿ, ರಕ್ತ ಕೊಡಲು ಹಿಂಜರಿಯಬಾರದು. ರಕ್ತವನ್ನು ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗದು. ತುರ್ತು ಸಂದರ್ಭ ರಕ್ತ ಸಿಗದೆ ಹಲವರು ಜೀವ ಕಳೆದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿ ಬರಬಾರದೆಂದು ನಿವೃತ್ತ ಪೋಸ್ಟ್ ಮಾಸ್ಟರ್ ಕೆ.ರಘು ಹೇಳಿದರು. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜ ಪಾಲಿಬೆಟ್ಟ ಉಪಸಮಿತಿ ಅಧ್ಯಕ್ಷ ವಿ.ಬಿ.ರಿನಿಲ್, ಕಾರ್ಯಕ್ರಮ ಸಂಚಾಲಕರಾಗಿರುವ ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಪುತ್ತಂ ಪ್ರದೀಪ್ ಬಾಲನ್ ಇದ್ದರು. ಬಿ.ಜೆ. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು. ರೇಖಾ ಗಣೇಶ್ ಪ್ರಾರ್ಥಿಸಿದರು.
ಸನ್ಮಾನ : : ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಲೋಹಿತ್, ದಂತ ವೈದ್ಯ ಡಾ.ಜಗದೀಶ್, ನಿವೃತ್ತ ಪೋಸ್ಟ್ ಮಾಸ್ಟರ್ ಕೆ.ರಘು, 27ನೇ ಬಾರಿ ರಕ್ತದಾನ ಮಾಡಿದ ವಿ.ವಿ.ಅರುಣ್‍ಕುಮಾರ್, 15ನೇ ಬಾರಿ ರಕ್ತದಾನ ಮಾಡಿದ ಟಿ.ಎಂ.ಪ್ರಿಯಾ ಅವರನ್ನು ಸನ್ಮಾನಿಸಲಾಯಿತು.










