ಮಡಿಕೇರಿ ಜು.25 : ನಾಪೋಕ್ಲು ವ್ಯಾಪ್ತಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದೆ. ಮೂರ್ನಾಡು ನಾಪೋಕ್ಲು, ಚೆರಿಯ ಪರಂಬು-ನಾಪೋಕ್ಲು, ಭಾಗಮಂಡಲ-ನಾಪೋಕ್ಲು ನಡುವಿನ ಸಂಪರ್ಕ ಕಡಿತಗೊಂಡಿದೆ.
ಮಳೆ ಗಾಳಿಯಿಂದಾಗಿ ವಿವಿಧಡೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಬಿರುಸಿನಿಂದ ಸುರಿಯುತ್ತಿದ್ದು, ಜೀವ ನದಿ ಕಾವೇರಿ ಪ್ರವಾಹ ತುಂಬಿ ಬಹುತೇಕ ಭಾಗಗಳಲ್ಲಿ ಹಳ್ಳ, ಕೊಳ್ಳಗಳು ಭರ್ತಿಯಾಗಿದೆ. ಕಾವೇರಿ ನದಿತೀರದ ಹಲವು ಗದ್ದೆಗಳು ಜಲಾವೃತವಾಗಿವೆ.
ನಾಪೋಕ್ಲು- ಕೊಟ್ಟಮುಡಿ ಮಡಿಕೇರಿ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ ಬಂದು ಸಂಚಾರ ಸ್ಥಗಿತಗೊಂಡಿದೆ. ಚೆರಿಯ ಪರಂಬು ಕಲ್ಲುಮೊಟ್ಟೆ ರಸ್ತೆಯಲ್ಲಿ ಪ್ರವಾಹದ ಮಟ್ಟ ಹೆಚ್ಚಳವಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ.ಚೆರಿಯಪರಂಬು ಗ್ರಾಮದ ಅಲವು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಮಂಗಳವಾರವು ವರುಣನ ಆರ್ಭಟ ಮುಂದುವರೆದಿದ್ದು ಪ್ರವಾಹದ ಮಟ್ಟ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ.ಚೆರಿಯಪರಂಬು ಕಾವೇರಿ ನದಿ ದಂಡೆಯಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಸಚಿವರ ಭೇಟಿ ರದ್ದು :: ನಾಪೋಕ್ಲು ಕೊಟ್ಟಮುಡಿ ಮುಖ್ಯ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ ಬಂದ ಸಂಚಾರ ಕಡಿತ ಗೊಂಡ ಹಿನ್ನೆಲೆ ನಾಪೋಕ್ಲುವಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜ್ ಹಾಗೂ ಶಾಸಕ ಪೊನ್ನಣ್ಣ ಅವರ ಭೇಟಿ ರದ್ದುಪಡಿಸಲಾಗಿದೆ.









