ಮಡಿಕೇರಿ ಜು.25 : ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಮಳೆಹಾನಿಗೆ ಸಂಬಂಧಿಸಿದಂತೆ ಶಾಸಕರು, ಅಧಿಕಾರಿಗಳು ಹಾಗೂ ತಜ್ಞರ ಸಮಿತಿಯಿಂದ ವರದಿ ಪಡೆದುಕೊಂಡು ಸರ್ಕಾರ ಸೂಕ್ತ ಪರಿಹಾರವನ್ನು ಸೂಚಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಭರವಸೆ ನೀಡಿದ್ದಾರೆ.
ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಾಳೆ (ಜು.26) ಮುಖ್ಯಮಂತ್ರಿಗಳು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಓ, ಉಸ್ತುವಾರಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಳೆ, ಪ್ರವಾಹ ಹಾನಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಗುರುವಾರ ಸಚಿವ ಸಂಪುಟದ ಸಭೆಯೂ ನಡೆಯಲಿದೆ. ಜಿಲ್ಲೆಯ ಮಾಹಿತಿಯನ್ನು ಕಲೆ ಹಾಕಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಮಳೆಯಿಂದ ಉಂಟಾಗುವ ವಿಕೋಪಕ್ಕೆ ಶಾಶ್ವತ ಪರಿಹಾರದ ಬಗ್ಗೆಯೂ ತಜ್ಞರ ಸಮಿತಿ ಸೂಕ್ತ ಪರಿಹಾರೋಪಾಯದ ವರದಿ ನೀಡಲಿದೆ. ಈ ವರದಿಯಾನುಸಾರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ. ಕುಶಾಲನಗರದ ಮಳೆಹಾನಿ ಪೀಡಿತ ಬಡಾವಣೆಗಳ ನಾಗರಿಕರು, ಜಿಲ್ಲೆಯ ಕಾಫಿ ಬೆಳೆಗಾರರು ಮಳೆಯಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಸಚಿವರು ತಿಳಿಸಿದರು.
::: ಅರಗಿಸಿಕೊಳ್ಳಲು ಆಗುತ್ತಿಲ್ಲ :::
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಬೋಸರಾಜು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹತಾಶರಾಗಿ ಸರ್ಕಾರದ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡುವ ಪ್ರಯತ್ನ ನಡೆದಿದೆ. ಇದೇ ಕಾರಣಕ್ಕೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ, ಎಲ್ಲವೂ ಸರಿಯಾಗಿದೆ. ಸಿಂಗಾಪುರದಲ್ಲಿ ಸಭೆ ನಡೆಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ಉರುಳಿಸಲು ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಸ್ಪಷ್ಟಪಡಿಸಿದರು.
::: ಮಳೆಹಾನಿ ಪರಿಶೀಲನೆ :::
ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಕಂದಾಯ ಸಚಿವ ಕೃಷ್ಣಬೈರೇ ಗೌಡ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ ಮಳೆಹಾನಿ ಪ್ರದೇಶಗಳನ್ನು ಪರಿಶೀಲಿಸಿದರು.
ಕುಶಾಲನಗರದ ಪ್ರವಾಹ ಪೀಡಿತ ಸಾಯಿ ಬಡಾವಣೆ ಮತ್ತು ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ಸಂತ್ರಸ್ತರೊಂದಿಗೆ ಸಮಾಲೋಚಿಸಿದರು.
ಈ ಸಂದರ್ಭ ಪ್ರವಾಹ ಪೀಡಿತ ಬಡಾವಣೆಯ ನಿವಾಸಿಗಳು ಮಾತನಾಡಿ ಪ್ರತಿ ವರ್ಷ ಮಳೆಗಾಲದ ಸಂದರ್ಭ ತಮಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟ ಸಂದರ್ಭ ಬಡಾವಣೆಗಳು ಜಲಾವೃತವಾಗುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
::: ಹಾರಂಗಿಗೆ ಭೇಟಿ :::
ಹಾರಂಗಿ ಜಲಾಶಯಕ್ಕೆ ತೆರಳಿದ ಸಚಿವ ಬೋಸರಾಜು ಅಧಿಕಾರಿಗಳಿಂದ ಜಲಾಶಯದ ನೀರಿನ ಸಂಗ್ರಹ, ಒಳಹರಿವು, ಹೊರ ಹರಿವು, ಪ್ರವಾಹ ಮುನ್ನೆಚ್ಚರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದರು. ಬಡಾವಣೆಗಳಲ್ಲಿ ಪ್ರವಾಹ ತಲೆದೋರದ ರೀತಿಯಲ್ಲಿ ನದಿ ಪಾತ್ರಕ್ಕೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
::: ಭಾಗಮಂಡಲಕ್ಕೆ ಭೇಟಿ :::
ಪ್ರವಾಹ ಪೀಡಿತ ಕಾವೇರಿಯ ಕ್ಷೇತ್ರ ಭಾಗಮಂಡಲ, ಬೇಂಗೂರು, ಚೇರಂಬಾಣೆ ಮತ್ತಿತರ ಪ್ರದೇಶಗಳಿಗೂ ಸಚಿವರುಹಾಗೂ ಶಾಸಕರುಗಳು ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿ ವೆಂಕಟರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರ ಅಧಿಕಾರಿಗಳು ಭೇಟಿ ಸಂದರ್ಭ ಹಾಜರಿದ್ದರು.