ಮಡಿಕೇರಿ ಜು.25 : ಕೊಡಗು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಳಿಮುಖವಾಗಿದೆ. ಆದರೆ ನದಿ ನೀರಿನ ಪ್ರವಾಹ ತಗ್ಗದೆ ಇರುವುದರಿಂದ ಜನರ ಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಗಾಳಿ ಮತ್ತು ಪ್ರವಾಹದಿಂದಾಗಿ ಹಲವೆಡೆ ಹಾನಿ ಸಂಭವಿಸಿದ್ದು, ಹಲವು ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.
ದಾಖಲೆಯ ಮಳೆಯಾಗಿದ್ದ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಶ್ರೀಭಗಂಡೇಶ್ವರ ದೇವಾಲಯವನ್ನು ಆವರಿಸಿದ್ದ ಪ್ರವಾಹದ ನೀರು ತಗ್ಗಿದ್ದು, ಜನರು ಆತಂಕದಿಂದ ಹೊರ ಬಂದಿದ್ದಾರೆ. ಆದರೆ ಸುತ್ತಮುತ್ತಲ ಗ್ರಾಮಗಳ ರಸ್ತೆಗಳು ಹಾಗೂ ಮನೆಗಳು ಜಲಾವೃತಗೊಂಡಿವೆ.
ಮಡಿಕೇರಿ ನಗರದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದ್ದು, ಸಾಧಾರಣ ಮಳೆ, ಮಂಜು ಮತ್ತು ಚಳಿ ಗಾಳಿಯ ವಾತಾವರಣವಿದೆ. ಹಾರಂಗಿ ಜಲಾಶಯದಿಂದ ಬಿಟ್ಟ ನೀರು ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ ಮತ್ತು ಕುವೆಂಪು ಬಡಾವಣೆಗೆ ನುಗ್ಗಿದ್ದು, ಇಲ್ಲಿನ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ನೀರಿನಿಂದಾಗಿ ವಸ್ತುಗಳಿಗೆ ಹಾನಿಯಾಗಿದ್ದು, ಪ್ರವಾಹಪೀಡಿತ ಪ್ರದೇಶದಲ್ಲಿ ಲೇಔಟ್ ಮಾಡಲು ಆಡಳಿತ ವ್ಯವಸ್ಥೆ ಯಾಕೆ ಅವಕಾಶ ನೀಡಿತು ಎಂದು ಮನೆ ಮಾಲೀಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಮಳೆಯ ತೀವ್ರತೆ ಹೆಚ್ಚಾದ ಪರಿಣಾಮ ನಾಪೋಕ್ಲು ನಿವಾಸಿ ಅಜ್ಜೇಟಿರ ಬೋಪಣ್ಣ ಎಂಬುವರಿಗೆ ಸೇರಿದ ಅಂಗಡಿ ಮಳಿಗೆಗಳ ಮೇಲೆ ಪಕ್ಕದಲ್ಲಿದ್ದ ತಡೆಗೋಡೆ ಕುಸಿದುಬಿದ್ದು ನಷ್ಟ ಸಂಭವಿಸಿದೆ. ಸೋಮವಾರ ರಾತ್ರಿ ಅಂಗಡಿ ಮಳಿಗೆ ಮೇಲೆ ತಡೆಗೋಡೆ ಕುಸಿದಿದ್ದು ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿಗೂ ಹಾನಿಯಾಗಿದೆ. ಅಂದಾಜು 10 ಲಕ್ಷ ರೂ ಹಾನಿ ಸಂಭವಿಸಿದ್ದು ಸೂಕ್ತ ಪರಿಹಾರ ನೀಡುವಂತೆ ಮಾಲೀಕ ಅಜ್ಜೇಟಿರ ಬೋಪಣ್ಣ, ಸ್ಥಳೀಯರಾದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ವಿಶು ಪೂವಯ್ಯ ಆಗ್ರಹಿಸಿದ್ದಾರೆ.
ಸಮೀಪದ ಬಲಮುರಿ ಗ್ರಾಮದಲ್ಲಿ ಬಾರಿ ಗಾಳಿ ಮಳೆಗೆ ಗ್ರಾಮದ ನಿವಾಸಿ ಈರ ಎಂಬುವವರ ವಾಸದ ಮನೆಯ ಮೇಲ್ಚಾವಣಿಯ ಶೀಟ್ ಗಳು ಹಾರಿಹೋಗಿದ್ದು ನಷ್ಟ ಉಂಟಾಗಿದೆ.
ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದ ನಿವಾಸಿ ಕೆ.ಎಸ್. ಪೂವಣ್ಣ ಎಂಬುವವರ ಮನೆಯ ಮೇಲ್ಚಾವಣಿಯ ಹೆಂಚು ಹಾಗೂ ಶೀಟ್ ಗಳು ಗಾಳಿ ಮಳೆಗೆ ಹಾರಿಹೋಗಿ ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ.
ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಅಮೃತ, ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದರು.
ಸೋಮವಾರಪೇಟೆಯ ಬೇಳೂರು ಗ್ರಾ.ಪಂ ವ್ಯಾಪ್ತಿಯ ಬಳಗುಂದ ಗ್ರಾಮದ ಅಶ್ವಿನಿ, ಸುರೇಶ್ ಹಾಗೂ ಗಂಗು ಅವರ ಮನೆಗೆ ಮಳೆಯಿಂದ ಹಾನಿಯಾಗಿದ್ದು, ತಹಶೀಲ್ದಾರ್ ಎಸ್.ಎನ್. ನರಗುಂದ, ಪಿಡಿಒ, ಕಂದಾಯ ಪರಿವೀಕ್ಷಕರೊಂದಿಗೆ ಸ್ಥಳ ಪರಿಶೀಲಿಸಿದರು.
ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮಕ್ಕೆ ಕಂದಾಯ ಮತ್ತು ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿದರು. ಮಳೆಯಿಂದ ಸಂಭವಿಸಬಹುದಾದ ಅನಾಹುತದ ಕುರಿತು ನಿವಾಸಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ನೀಡಿದರು.
ಕುಶಾಲನಗರ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡುವಿನಲ್ಲಿ ಮನೆಗಳು ಮತ್ತು ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ಭಾಗಮಂಡಲ ಹೋಬಳಿ ಬೇಂಗೂರು ಚೇರಂಬಾಣೆ ವ್ಯಾಪ್ತಿಯ ದೋಣಿ ಕಡ್ ಎಂಬಲ್ಲಿ ಮಳೆಯಿಂದಾಗಿ ರಸ್ತೆಯು ಜಲಾವೃತವಾಗಿದ್ದು, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ನಿರ್ದೇಶನದಂತೆ ಅಗ್ನಿಶಾಮಕ ಠಾಣಾಧಿಕಾರಿ ಜಿಲ್ಲಾ ಅಗ್ನಿಶಾಮಕ ಘಟಕದ ಸಹಕಾರದೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಫೈಬರ್ ದೋಣಿಯನ್ನು ವ್ಯವಸ್ಥೆ ಕಲ್ಪಿಸಲಾಗಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಸಮೀಪದ ಬಲಮುರಿ ಹಾಗೂ ಕಕ್ಕಬ್ಬೆ ನಾಲಡಿ ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿ ನಷ್ಟ ಉಂಟಾಗಿದೆ.
ಕಕ್ಕಬ್ಬೆ ಗ್ರಾ.ಪಂ ವ್ಯಾಪ್ತಿಯ ನಾಲಡಿ ಗ್ರಾಮದ ನಿವಾಸಿ ಕೆ.ಎಸ್.ಪೂವಣ್ಣ ಎಂಬುವವರ ಮನೆಯ ಮೇಲ್ಚಾವಣಿಯ ಹೆಂಚು ಹಾಗೂ ಶೀಟ್ ಗಳು ಬಾರಿ ಗಾಳಿ ಮಳೆಗೆ ಹಾರಿಹೋಗಿ ಅಪಾರ ನಷ್ಟ ಸಂಭವಿಸಿದೆ. ಬಲಮುರಿ ಗ್ರಾಮದ ನಿವಾಸಿ ಈರ ಎಂಬುವವರ ಮನೆಯ ಮೇಲ್ಚಾವಣಿಯ ಶೀಟ್‍ಗಳು ಗಾಳಿ ಮಳೆಗೆ ಹಾರಿ ಹೋಗಿದ್ದು, ನಷ್ಟ ಉಂಟಾಗಿದೆ. ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮೂರ್ನಾಡು ನಾಪೋಕ್ಲು, ಚೆರಿಯ ಪರಂಬು-ನಾಪೋಕ್ಲು , ಭಾಗಮಂಡಲ-ನಾಪೋಕ್ಲು ನಡುವಿನ ಸಂಪರ್ಕ ಕಡಿತಗೊಂಡಿದೆ. ಮಳೆ ಗಾಳಿಯಿಂದಾಗಿ ವಿವಿಧಡೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಬಿರುಸಿನಿಂದ ಸುರಿಯುತ್ತಿದ್ದು, ಜೀವ ನದಿ ಕಾವೇರಿ ಪ್ರವಾಹ ತುಂಬಿ ಬಹುತೇಕ ಭಾಗಗಳಲ್ಲಿ ಹಳ್ಳ, ಕೊಳ್ಳಗಳು ಭರ್ತಿಯಾಗಿದೆ. ಕಾವೇರಿ ನದಿತೀರದ ಹಲವು ಗದ್ದೆಗಳು ಜಲಾವೃತವಾಗಿವೆ.
ನಾಪೋಕ್ಲು – ಕೊಟ್ಟಮುಡಿ ಮಡಿಕೇರಿ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ ಬಂದು ಸಂಚಾರ ಸ್ಥಗಿತಗೊಂಡಿದೆ. ಚೆರಿಯ ಪರಂಬು ಕಲ್ಲುಮೊಟ್ಟೆ ರಸ್ತೆಯಲ್ಲಿ ಪ್ರವಾಹದ ಮಟ್ಟ ಹೆಚ್ಚಳವಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಚೆರಿಯಪರಂಬು ಗ್ರಾಮದ ಹಲವು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಮಂಗಳವಾರವು ವರುಣನ ಆರ್ಭಟ ಮುಂದುವರೆದಿದ್ದು, ಪ್ರವಾಹದ ಮಟ್ಟ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ. ಚೆರಿಯಪರಂಬು ಕಾವೇರಿ ನದಿ ದಂಡೆಯಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿವೆ. ಕಳೆದ ಎರಡು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತ್ತಾಗಿದೆ.
Breaking News
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್‌ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*