ಸೋಮವಾರಪೇಟೆ ಜು.25 : ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಹೊಸಳ್ಳಿಯ ಕುಶಾಲಪ್ಪ ಅವರ ಗದ್ದೆಯಲ್ಲಿ ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಒಕ್ಕಲುತನವೇ ಪ್ರಮುಖವಾಗಿರುವ ಒಕ್ಕಲಿಗ ಸಮುದಾಯ ನಾಡಿಗೆ ಅನ್ನ ನೀಡುವ ಅನ್ನದಾತನಿದ್ದಂತೆ. ಸಮುದಾಯ ಬಾಂಧವರು ಕೇವಲ ಕೃಷಿಯಲ್ಲಿ ಮಾತ್ರ ತೊಡಗಿಸಿಕೊಳ್ಳದೇ ಇತರ ಕ್ಷೇತ್ರಗಳತ್ತಲೂ ಗಮನಹರಿಸುತ್ತಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮುದಾಯ ಮುಂದೆ ಬರಬೇಕಿದೆ ಎಂದರು.
ಕೆಸರು ಗದ್ದೆ ಕ್ರೀಡಾಕೂಟಗಳು ಪರಸ್ಪರ ಸಾಮರಸ್ಯ ವೃದ್ಧಿಗೆ ಸಹಕಾರಿಯಾಗಿವೆ. ಮಕ್ಕಳು ಮಹಿಳೆಯರು, ವೃದ್ದರಾದಿಯಾಗಿ ಎಲ್ಲಾ ವಯೋಮಾನದ ಮಂದಿ ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಒಂದುಗೂಡುವುದರಿಂದ ನವ ಚೈತನ್ಯದೊಂದಿಗೆ ದೈಹಿಕ ಕ್ಷಮತೆಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ಹುಣಸೂರು ಕ್ಷೇತ್ರದ ಶಾಸಕ ಹರೀಶ್ ಗೌಡ ಅವರುಗಳು ಭಾಗವಹಿಸಿದ್ದರು. ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ ವಹಿಸಿದ್ದರು. ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪಳ್ಳಿ ರವೀಂದ್ರ, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಉದ್ಯಮಿ ಅರುಣ್ ಕೊತ್ನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಾಲಿಬಾಲ್ ಪಂದ್ಯಾಟದಲ್ಲಿ ಕೂಗೂರು ಪಂಚಲಿಂಗೇಶ್ವರ ಯುವಕ ಸಂಘ ಪ್ರಥಮ, ಮದಲಾಪುರ ಕಲ್ಪವೃಕ್ಷ ಯುವಕ ಸಂಘ ದ್ವಿತೀಯ, ಥ್ರೋಬಾಲ್‍ನಲ್ಲಿ ಶಾಂತಳ್ಳಿಯಲ್ಲಿ ಭಾಗ್ಯ ಫ್ರೆಂಡ್ಸ್ ಪ್ರಥಮ, ನೇಗಳ್ಳೆಯ ವೀರಭದ್ರೇಶ್ವರ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆಯಿತು.
ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ನೇಗಳ್ಳೆ ತಂಡ ಪ್ರಥಮ, ನೇರಳೆ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ನೇಗಳ್ಳೆ ಪ್ರಥಮ ಹಾಗೂ ಆಡಿನಾಡೂರು ದ್ವಿತೀಯ ಸ್ಥಾನ ಪಡೆಯಿತು. ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ರವೀಶ್ ಪ್ರಥಮ, ಅರೆಯೂರು ರಘು ದ್ವಿತೀಯ, ದಂಪತಿ ಓಟದಲ್ಲಿ ಅಬ್ಬೂರುಕಟ್ಟೆ ಸಂಭ್ರಮ್-ಭಾರ್ಗವಿ ಪ್ರಥಮ, ಮೋರಿಕಲ್ಲು ದೀಕ್ಷಿತ್-ನಿಶಾ ದ್ವಿತೀಯ, ಪಾಸಿಂಗ್‍ದ ಬಾಲ್‍ನಲ್ಲಿ ಚಿಕ್ಕಬ್ಬೂರು ವಾಣಿ ಪ್ರಥಮ, ಮೋರಿಕಲ್ಲಿ ಜ್ಯೋತಿ ದ್ವಿತೀಯ, ಪಾಸಿಂಗ್ ದ ಬಾಟಲ್‍ನಲ್ಲಿ ಪವನ್ ನೇಗಳ್ಳೆ ಪ್ರಥಮ ಸ್ಥಾನ ಪಡೆದರು.
ಇದರೊಂದಿಗೆ ಒಂದರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ, ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಗದ್ದೆ ಓಟ ಆಯೋಜಿಸಿ ವಿತರಿಸಲಾಯಿತು.









