ಸೋಮವಾರಪೇಟೆ: ಜೈಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಪತ್ರಿಕಾಭವನ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಯೋಧರಿಗೆ ಸಂತಾಪ ಸಭೆ ನಡೆಯಿತು.
ಸಿಆರ್‍ಪಿಎಫ್ ನಿವೃತ್ತ ಡೆಪ್ಯೂಟಿ ಕಮಾಡೆಂಟ್ ಮಂಜುನಾಥ್, ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಸೈನಿಕರಿಗೆ ದೇಶ ಮೊದಲು, ನಂತರ ಕುಟುಂಬ ಎಂಬಂತೆ ಕೆಲಸ ಮಾಡುತ್ತಾರೆ. ನಾನು ಯುವಕನಾಗಿದ್ದಾಗ ಕ್ರೀಡಾಪಟುವಾಗಿದ್ದೆ, ನಂತರ ಸೈನ್ಯಕ್ಕೆ ಸೇರಿ ದೇಶಸೇವೆಯೊಂದಿಗೆ ಕ್ರೀಡೆಯಲ್ಲೂ ಸಾಧನೆ ಮಾಡಿದ್ದೇನೆ. ಜಮ್ಮು ಕಾಶ್ಮೀರದಲ್ಲೂ ಹತ್ತು ವರ್ಷ ಸೇವೆ ಮಾಡಿದ್ದೇನೆ. ನನ್ನ ಸೇವೆ ಸಂದರ್ಭದಲ್ಲೂ ಅನೇಕ ಸ್ನೇಹಿತರ ಬಲಿದಾನವಾಗಿದೆ. ಇವತ್ತು ದೇಶದ ಜನತೆ ನೆಮ್ಮದಿಯಿಂದ ಇರಬೇಕೆಂದರೆ ಸೈನಿಕರ ತ್ಯಾಗ ಪಾಲು ಇದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಿ.ಆರ್.ಈರಪ್ಪ ಮಾತನಾಡಿ, 24 ವರ್ಷದ ಹಿಂದೆ ನಡೆದ ಕಾರ್ಗಿಲ್ ಯುದ್ದದಲ್ಲಿ 520 ಯೋಧರು ಪ್ರಾಣತ್ಯಾಗ ಮಾಡಿ ಗೆಲುವು ತಂದುಕೊಟ್ಟಿದ್ದಾರೆ. ಪ್ರತಿಯೊಬ್ಬರು ದೇಶವನ್ನು, ದೇಶದ ಯೋಧರನ್ನು ಗೌರವಿಸಬೇಕು. ದೇಶಪ್ರೇಮಿಗಳೆಲ್ಲರೂ ಭಾರತದ ಸೈನಿಕರೆ ಎಂದು ಹೇಳಿದರು.
ಬಾಲಪ್ರತಿಭೆ ಶ್ರೀಶಾ ಮಾತನಾಡಿ, ಕಾರ್ಗಿಲ್ ಯುದ್ದದಲ್ಲಿ ಅತ್ಯಂತ ಪರಾಕ್ರಮಿ ಯೋಧರ ದಾನವಾಗಿದೆ. ಅನೇಕರು ಗಾಯಗೊಂಡಿದ್ದಾರೆ. ಪ್ರತಿಯೊಬ್ಬರು ದೇಶಪ್ರೇಮಿಗಳಾಗಬೇಕು. ಸೈನಿಕರ ಬಗ್ಗೆ ಅಪಾರ ಗೌರವ ಇಟ್ಟುಕೊಳ್ಳಬೇಕು. ಕೇವಲ ಸಾಮಾಜಿಕ ಜಾಲತಾಣದ ದೇಶಪ್ರೇಮಿಗಳಾದರೆ ಪ್ರಯೋಜನವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಉಪಾದ್ಯಕ್ಷ ನಿವೃತ್ತ ಕ್ಯಾಪ್ಟನ್ ಸುಬ್ರಮಣಿ, ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಸುಕುಮಾರ್ ಇದ್ದರು.