ಮಡಿಕೇರಿ ಜು.26 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ವೀಕ್ಷಿಸಿ, ಅಲ್ಲಿನ ಸ್ಥಳೀಯರಿಂದ ಮಾಹಿತಿ ಪಡೆದರು.
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರು ಹಾಗೂ ವಣಚಲು ಪ್ರದೇಶಕ್ಕೆ ತೆರಳಿ ಮಳೆ ಹಾನಿ ಸಂಬಂದ ಮಾಹಿತಿ ಪಡೆದರು.
ಮನೆ ಹಾನಿ ಹಾಗೂ ಬರೆ ಕುಸಿತ ಪ್ರದೇಶಕ್ಕೆ ತೆರಳಿ ವೀಕ್ಷಿಸಿದ ಸಚಿವರು. ಮಳೆ ಹಾನಿ ಸಂಬಂಧ ಸರ್ಕಾರದಿಂದ ನಿಯಮಾನುಸಾರ ಪರಿಹಾರ ದೊರೆಯಲಿದೆ ಎಂದು ಸಚಿವರು ಹೇಳಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಗಾಳಿಬೀಡು ಪ್ರದೇಶವು ಎತ್ತರ ಪ್ರದೇಶದಲ್ಲಿದ್ದು ಹೆಚ್ಚಿನ ಮಳೆಯಾಗುತ್ತದೆ. ಇದರಿಂದ ಬರೆ ಕುಸಿತ, ಮನೆ ಹಾನಿ ಉಂಟಾಗುತ್ತಿದೆ. ಈ ಸಂಬಂಧ ಸೂಕ್ತ ಪರಿಹಾರ ಕಲ್ಪಿಸಬೇಕಿದೆ ಎಂದು ಹೇಳಿದರು.
ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಮಳೆ ಹಾನಿ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯವಿರುವ ಕಡೆಗಳಲ್ಲಿ ಟಾರ್ಪಲ್ ವಿತರಿಸುವಂತೆ ನಿರ್ದೇಶನ ನೀಡಿದರು.
ಗಾಳಿಬೀಡು ಬಳಿಯ ಸೇತುವೆ ವೀಕ್ಷಿಸಿದ ಸಚಿವರು, ಬರೆಕುಸಿತ, ಮನೆ ಹಾನಿ, ಸೇತುವೆ, ಕಾಲುವೆ ಹಾನಿ ಬಗ್ಗೆ ಮಾಹಿತಿ ಪಡೆದರು. ಮಳೆ ಮತ್ತು ಗಾಳಿಯಿಂದ ಬಿದ್ದ ಮರಗಳನ್ನು ತೆರವುಗೊಳಿಸಲು ಅಗತ್ಯ ಕ್ರಮವಹಿಸಬೇಕು. ಹೆಚ್ಚಿನ ಮಳೆಯಾದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಅವರು ಸೂಚಿಸಿದರು.
ಮನೆ ಹಾನಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಮುಂದುವರೆದಿದ್ದು, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಅಗತ್ಯವಿರುವ ಕಡೆ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಹೊದವಾಡ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರಿ ಶಾಲೆ ಬಳಿ ಕೆರೆ ಇದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಶಾಲೆ ಬಳಿ ತಡೆಗೋಡೆ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸೂಚಿಸಿದರು.
ಬಳಿಕ ನಾಪೋಕ್ಲು ಬಳಿಯ ಚೆರಿಯಪರಂಬು ಪ್ರವಾಹ ಪೀಡತ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಚೆರಿಯಪರಂಬು ರಸ್ತೆ ಪ್ರತೀ ವರ್ಷ ಪ್ರವಾಹಕ್ಕೆ ತುತ್ತಾಗುತ್ತಿದ್ದು, ಈ ರಸ್ತೆಯನ್ನು ಮೇಲ್ದರ್ಜೆಗೇರಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸೂಚಿಸಿದರು.
ಬೇತೂರು ಗ್ರಾಮದ ಬೋಪಣ್ಣ ಅವರ ವಾಸದ ಮನೆ ಹಿಂಭಾಗ ಬರೆ ಜರಿದಿದ್ದು, ಇದನ್ನು ಪರಿಶೀಲಿಸಿದರು. ಈ ಸ್ಥಳದಲ್ಲಿ ನಾಲ್ಕು ಅಂಗಡಿ ಮಳಿಗೆ ಮಳೆಗೆ ಹಾನಿಯಾಗಿದ್ದು ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಮಳೆ ಹಾನಿ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಸದಾ ಸಿದ್ಧವಿದೆ. ಆ ನಿಟ್ಟಿನಲ್ಲಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಸ್ಥಳೀಯ ಜನಪ್ರತಿನಿಧಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಇತರರು ಇದ್ದರು.