ಮಡಿಕೇರಿ ಜು.31 : ಮೆಂಡಾ ಫೌಂಡೇಶನ್ ಮತ್ತು ಎಸ್ & ಪಿ ಗ್ಲೋಬಲ್ ಫೌಂಡೇಶನ್ ಪ್ರಾಯೋಜಕತ್ವದೊಂದಿಗೆ ಹಾಗೂ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್, ಚೆಂಬು ಗ್ರಾಮ ಪಂಚಾಯಿತಿ ಯ ಸಹಕಾರದೊಂದಿಗೆ ಚೆಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್” ಅನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ, ಯೋಜನೆಯನ್ನು ಅನುಷ್ಠಾನ ಮಾಡಿರುವ ಸಂಸ್ಥೆಯ ಪ್ರಮುಖರು, ಗ್ರಾ.ಪಂ ಅಧ್ಯಕ್ಷೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ 2 ವರ್ಷದಿಂದ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದ ಯತೀಶ ಕುಂದಲ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚೆಂಬು ಗ್ರಾ.ಪಂ ಅಧ್ಯಕ್ಷೆ ಎ. ಕುಸುಮ, ಸದಸ್ಯರುಗಳಾದ ರಮೇಶ ಹುಲ್ಲುಬೆಂಕಿ, ಎನ್.ಟಿ.ವಸಂತ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ್ರು , ಎಸ್.ಡಿ.ಎಂ. ಸಿ ಅಧ್ಯಕ್ಷ ಜಿ.ಆರ್. ಲಕ್ಷ್ಮಣ, ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ಬಿ.ಎ. ಆಶಿಕ್, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು, ಹಿರಿಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಸೆಲ್ಕೋ ಸೋಲಾರ್ ಸಿಬ್ಬಂದಿಗಳು, ಪೋಷಕರು, ಊರಿನವರು, ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕ ಕೆ.ಆರ್.ಸೋಮಣ್ಣ ಸ್ವಾಗತಿಸಿ, ಎಂ.ಬಿ.ವಿಕ್ರಾಂತ ನಿರೂಪಿಸಿ, ವಂದಿಸಿದರು.