ಮಡಿಕೇರಿ ಜು.31 : ಭಾನುವಾರ ತಡರಾತ್ರಿ ಗಾಳಿಮಳೆಯಿಂದ ಮನೆ ಮೇಲೆ ಮರಬಿದ್ದು ಸಂಕಷ್ಟ ಅನುಭಿವುಸತ್ತಿದ್ದ ಕುಟುಂಬಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಅವರು ಸಕಾಲಿಕವಾಗಿ ಸ್ಪಂದಿಸಿದ್ದು, ಶಾಸಕರ ಬದ್ಧತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ ಘಟನೆ ಅರುವತ್ತೋಕ್ಲು ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಜ್ಯೋತಿ ಪರಿಶಿಷ್ಟ ಜಾತಿ ಕಾಲೋನಿಯ ನಿವಾಸಿಯಾದ ಶಿವಯ್ಯ ಎಂಬುವವರ ಮನೆಯ ಮೇಲೆ ಗಾಳಿಮಳೆಗೆ ಮರವೊಂದು ಉರುಳಿ ಬಿದ್ದು ಶಿವಯ್ಯ ಅವರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಕಾಲೋನಿ ನಿವಾಸಿಗಳು ಶಾಸಕರ ಆಪ್ತರಾದ ತೆನ್ನಿರ ಮೈನಾ ಅವರಿಗೆ ದೂರವಾಣಿ ಕರೆ ಮಾಡಿ ನೆರವು ಕೋರಿದ್ದಾರೆ.
ತೆನ್ನಿರ ಮೈನಾ ಅವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಪೊನ್ನಣ್ಣ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕರ ನಿರ್ದೇಶನದ ಮೇರೆಗೆ ಕಂದಾಯ ನಿರೀಕ್ಷಕರಾದ ವೆಂಕಟೇಶ್, ಬೆಟ್ಟಗೇರಿ ಗ್ರಾಮ ಪಂಚಾಯತ್ ಪಿಡಿಒ ಉದಯ್ ಮತ್ತು ಸಿಬ್ಬಂದಿಗಳೊಂದಿಗೆ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಲಿ ಮಾದಯ್ಯ, ಉಪಾಧ್ಯಕ್ಷರಾದ ಕೃಷ್ಣಪ್ಪ ಅವರ ಸಮ್ಮುಖದಲ್ಲಿ ಸ್ಥಳ ಪರಿಶೀಲಿಸಿ ಕ್ರಮ ಕೈಗೊಂಡು ಶಾಸಕರಿಗೆ ವರದಿ ಒಪ್ಪಿಸಿದ್ದಾರೆ. ಪಕ್ಕದ ತೋಟದಲ್ಲಿ ಕೆಲವು ಮರಗಳು ಕಾಲೋನಿಯ ಮನೆಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಇದ್ದು, ಅವುಗಳನ್ನು ತಕ್ಷಣವೇ ತೆರವುಗೊಳಿಸಲು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಕಂದಾಯ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.









