ನಾಪೋಕ್ಲು ಆ.1 : ಕೊಡವ ಜನಾಂಗ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ನಿರ್ವಹಿಸಿದರೆ ಜಿಲ್ಲೆಯ ಪ್ರಗತಿ ಸಾಧ್ಯ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲು ಕೊಡವ ಸಮಾಜದ ಆಶ್ರಯದಲ್ಲಿರುವ ಕ್ರೀಡಾ ಸಾಂಸ್ಕೃತಿಕ ಮತ್ತು ಮನೋರಂಜನಾ ಕೂಟದ ವಾರ್ಷಿಕ ಒತ್ತೋರ್ಮೆ ಕೂಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆ ಅವಧಿಯಲ್ಲಿ ಪಕ್ಷಕ್ಕಾಗಿ, ಗೆಲುವಿಗಾಗಿ ಹೋರಾಟ ನಡೆಸುವುದು ಅನಿವಾರ್ಯ. ಬಳಿಕ ಸಾಮಾಜಿಕ ಸೇವೆಯಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದರೆ ಎಲ್ಲರ ವಿಶ್ವಾಸಗಳಿಸಲು ಸಾಧ್ಯ ಎಂದರು.
ಜನಾಂಗಗಳ ನಡುವೆ ದ್ವೇಷಸಾಧನೆ, ವೈಯಕ್ತಿಕ ಅವಹೇಳನ, ತೇಜೋವಧೆ ಮಾಡುವುದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಯುವ ಜನಾಂಗಕ್ಕೆ, ಮುಂದಿನ ಪೀಳಿಗೆಗೆ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಲು ವಿಫಲ ಅವಕಾಶ ಇದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾಪೋಕ್ಲುವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ಜನ ಸಾಮಾನ್ಯರಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು. ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆ ಇದ್ದು, ನಾಪೋಕ್ಲುವಿನಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ ಜಿಲ್ಲೆಯ ಕೊಡವರ ಸಂಸ್ಕೃತಿ ವಿಶಿಷ್ಟವಾದುದು. ಇಲ್ಲಿನ ಪದ್ಧತಿ, ಪರಂಪರೆ, ಹವಾಮಾನ, ಜೀವನಶೈಲಿ ಪ್ರತಿಯೊಂದು ಕೂಡ ವಿಶಿಷ್ಟವಾದುದು. ಆದರೆ ಹವಮಾನ ವೈಪರೀತ್ಯದಿಂದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿಯನ್ನು ನಂಬಿ ಬದುಕುವ ರೈತರಿಗೆ ಸರ್ಕಾರದ ನೆರವು ಬೇಕಿದೆ. ಕೊಡವ ಜನಾಂಗದ ಸಂಖ್ಯೆ ಕಡಿಮೆ ಆಗುತ್ತಿದೆ. ಕೊಡವರ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಹಿರಿಯರು ಕಾರ್ಯಪ್ರವೃತ್ತರಾಗಬೇಕು ಎಂದರು.
ಜಿಲ್ಲೆಯ ಜನರು ಎದುರಿಸುತ್ತಿರುವ ಕಾನೂನು ತೊಡಕುಗಳನ್ನು ನಿವಾರಿಸಲು ನೂತನ ಶಾಸಕರು ವಿಶೇಷ ಗಮನಹರಿಸಬೇಕು ಎಂದರು.
ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ನಾಲ್ಕುನಾಡಿನಲ್ಲಿ ತೀವ್ರ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಮಳೆಗಾಲ ಗ್ರಾಮೀಣ ಪ್ರದೇಶಗಳು ಬಹುತೇಕ ಕತ್ತಲಲ್ಲಿ ಮುಳುಗುತ್ತಿವೆ. ನಾಲ್ಕು ನಾಡಿನ 24 ಗ್ರಾಮಗಳ ಮಂದಿಗೆ ನಿರಂತರವಾಗಿ ವಿದ್ಯುತ್ ಸೌಲಭ್ಯ ದೊರಕುವಂತಾಗಬೇಕು ಎಂದರು.
ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು ಕೊಡವ ಎಂದು ನಮೂದಿಸುವ ಕುರಿತು ಕ್ಯಾಬಿನೆಟ್ ಅನುಮೋದನೆ ನೀಡಲು ಕಾರಣಕರ್ತರಾದ ಶಾಸಕ ಪೊನ್ನಣ್ಣ ಅವರನ್ನು ಕೊಡವ ಸಮಾಜ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಅಭಿನಂದಿಸುತ್ತಿವೆ ಎಂದರು.
ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತೀರ ಎನ್.ಅಪ್ಪಚ್ಚು ಮಾತನಾಡಿ, ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕಾದರೆ ಸ್ಟೇಷನ್ ನಿರ್ಮಿಸಲು ಜಾಗದ ಅವಶ್ಯಕತೆ ಇದೆ. ಸೂಕ್ತವಾದ ಜಮೀನನ್ನು ನೀಡಿದರೆ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.
ಕೊಡವ ಸಮಾಜದ ಕ್ರೀಡಾ ಸಾಂಸ್ಕೃತಿಕ ಮತ್ತು ಮನೋರಂಜನ ಕೂಟದ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿ, ಕೂಟ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಕೆಲೇಟಿರ ದಿವ್ಯ ರತ್ನ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಮಂಡಿರ ರಾಜಪ್ಪ ಚಂಗಪ್ಪ ಸ್ವಾಗತಿಸಿದರು. ಮಣವಟ್ಟೀರ ದಯಾ ಚಿಣ್ಣಪ್ಪ ಕಾರ್ಯಕ್ರಮ ನಿರೂಪಿಸಿ, ಬಾಚಮಂಡ ಲವ ಚಿಣ್ಣಪ್ಪ ವಂದಿಸಿದರು.
ವೇದಿಕೆಯಲ್ಲಿ ಕೂಟದ ಉಪಾಧ್ಯಕ್ಷ ಕೊಂಡಿರ ನಂದಕುಮಾರ್, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ಖಜಾಂಚಿ ಮಂಡಿರ ರಾಜಪ್ಪ ಚಂಗಪ್ಪ, ನಿರ್ದೇಶಕರಾದ ಬಾಚಮಂಡ ಲವ ಚಿಣ್ಣಪ್ಪ, ಕೇಟೋಳಿರ ರೀನಾ ಸದಾ,ಕೆಲೇಟಿರ ದಿವ್ಯ ರತ್ನ, ಕಲಿಯ0ಡ ಕೌಶಿಕ್, ಮಾಚೆಟ್ಟಿರ ಕುಶು ಕುಶಾಲಪ್ಪ, ಬದಂಜೆಟ್ಟಿರ ದೇವಿದೇವಯ್ಯ, ಬೊಪ್ಪೆರ ಜಯ ಉತ್ತಪ್ಪ, ಕರವಂಡ ಸರು ಸೋಮಣ್ಣ ಹಾಜರಿದ್ದರು.
ಇದಕ್ಕೂ ಮುನ್ನ ಕೊಡವ ಸಮಾಜದ ಸದಸ್ಯರಿಗೆ ವಿವಿಧ ಕ್ರೀಡಾಕೂಟಗಳು ನಡೆದವು. ಮಕ್ಕಳಿಗೆ, ಯುವಕರಿಗೆ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಹಾಗೂ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತಿರ ಎನ್.ಅಪ್ಪಚ್ಚು ಅವರಿಗೆ ಕೊಡವ ಸಮಾಜದ ಕ್ರೀಡಾ ಸಾಂಸ್ಕೃತಿಕ ಮತ್ತು ಮನೋರಂಜನಾ ಕೂಟದ ವತಿಯಿಂದ ಶಾಲು ಒದಿಸಿ ಫಲ ತಾಂಬೂಲ ಒಡಿಕತ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭ ಸ್ಥಳೀಯ ಅಂಕುರ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ವರದಿ : ದುಗ್ಗಳ ಸದಾನಂದ