ನಾಪೋಕ್ಲು ಆ.1 : ನಾಪೋಕ್ಲು ಕೊಡವ ಸಮಾಜದ ಮೊಮ್ಮಕ್ಕಡ ಪರಿಷತ್ ವತಿಯಿಂದ ಆ.3ರಂದು ಮೂರನೇ ವರ್ಷದ ಕಕ್ಕಡ 18ರ ತೀನಿ ನಮ್ಮೆಯನ್ನು ಹಮ್ಮಿಕೊಳ್ಳಲಾಗಿದ್ದು, ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ವಿವಿಧ ತಿನಿಸುಗಳ ಪ್ರದರ್ಶನ ಮತ್ತು ಪೈಪೋಟಿಯನ್ನು ಏರ್ಪಡಿಸಲಾಗಿದೆ ಎಂದು ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮಕ್ಕಳು ಹಳೆ ಕಾಲದ ತಿಂಡಿತಿನಿಸುಗಳನ್ನು ಮರೆಯುತ್ತಿದ್ದಾರೆ. ಅಂತಹ ತಿಂಡಿತಿನಿಸುಗಳು ಚರಿತ್ರೆಯಲ್ಲಿ ಮರೆತು ಹೋಗುವ ಸಾಧ್ಯತೆಇದೆ. ಅದನ್ನು ದಾಖಲಿಸುವ ಹಿನ್ನೆಲೆಯಲ್ಲಿ ಕಕ್ಕಡ 18ರ ತೀನಿ ನಮ್ಮೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತೀನಿ ನಮ್ಮೆಯ ಪೈಪೋಟಿಯಲ್ಲಿ ಪ್ರದರ್ಶನಕ್ಕಿರಿಸುವ ತಿನಿಸುಗಳನ್ನು ತೀರ್ಪುಗಾರರು ಪರೀಕ್ಷಿಸಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ಸಂದರ್ಭ ಸಾಧಕ ಮಹಿಳೆಯರನ್ನು ಗೌರವಿಸಲಾಗುವುದು ಎಂದರು.
ಅಂದಿನ ಕಾರ್ಯಕ್ರಮವನ್ನು ಪರಿಷತ್ ಖಜಾಂಚಿ ಮೂವೇರ ಧರಣಿ ಗಣಪತಿ ಉದ್ಘಾಟಿಸಲಿದ್ದಾರೆ. ತಿನಿಸುಗಳ ಪ್ರದರ್ಶನವನ್ನು ನಿವೃತ್ತ ಪೋಸ್ಟ್ ಮಾಸ್ಟರ್ ಪೆಬ್ಬಾಟಂಡ ಪುಷ್ಪ ತಮ್ಮಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ, ಅಂಕುರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೇಟೋಳಿರ ರತ್ನ ಚರ್ಮಣ್ಣ ಹಾಗೂ ಜ್ಞಾನೋದಯ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ವೇತನ್ ಚಂಗಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
ಮಳೆಗಾಲದ ಖಾದ್ಯಗಳಾದ ಸಾಂಬಾರು, ಚಟ್ನಿ, ಪಲ್ಯ ಸೇರಿದಂತೆ ವಿವಿಧ ತಿನಿಸುಗಳ ಸ್ಪರ್ಧೆ ನಡೆಯಲಿದ್ದು, ಕೊಡವ ಜನಾಂಗದ ಆಸಕ್ತ ಮಹಿಳೆಯರು ಬೆಳಿಗ್ಗೆ 10 ಗಂಟೆಯ ಒಳಗಾಗಿ ಪ್ರದರ್ಶನಕ್ಕೆ ತಿಸಿಸುಗಳನ್ನು ಇರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ನಿರ್ದೇಶಕರಾದ ಕುಲ್ಲೇಟಿರ ಹೇಮಾ ಅರುಣ್ , ಬಿದ್ದಂಡ ಉಷಾ ದೇವಮ್ಮ, ನಾಟೋಳಂಡ ಕಸ್ತೂರಿ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ