ಸೋಮವಾರಪೇಟೆ ಆ.1 : ಕಾವ್ಯ ಲಲಿತ ಕಲೆ ಗಳಲ್ಲೊಂದು, ಇತರ ಕಲೆಗಳಿಗಿಂತ ಭಿನ್ನವಾಗಿ ಒಂದು ವೈಶಿಷ್ಟ ವನ್ನು ಪಡೆದುಕೊಂಡಿದೆ ಎಂದು ಪ್ರಾದ್ಯಪಕ, ಸಾಹಿತಿ, ಜಾನಪದ ವಿದ್ವಾಂಸ ಡಾ. ಮೋಹನ್ ಪಾಳೇಗಾರ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ನಡೆದ “ನೆಲ ಮುಗಿಲು” ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಅನ್ಯ ಕಲೆಗಳಲ್ಲಿ ಒಂದಕ್ಕೊಂದು ಅದರದೆಯಾದ ಮಾದ್ಯಮವುಂಟು, ಕಾವ್ಯಕ್ಕೆ ಹಾಗೆ ಪ್ರತ್ಯೇಕವಾದ ಮಾಧ್ಯಮವಿಲ್ಲ ಕಾವ್ಯ ಸಾರ್ಥಕವಾಗಬೇಕಾದರೆ ಅದು ಓದುಗರ ಹೃದಯಕ್ಕೆ ಮುಖ ಮಾಡಿರಬೇಕು. ಅವರ ಹೃದಯವನ್ನು ಮುಟ್ಟಬೇಕು ತಟ್ಟಬೇಕು ಇಲ್ಲವಾದರೆ ಅಂತಹ ಕಾವ್ಯ ನಿರರ್ಥಕವಾಗುತ್ತದೆ. ಬಾಹ್ಯ ವಸ್ತುಗಳು ಕವಿಗೆ ಮುಖ್ಯವಲ್ಲ ಅವುಗಳು ನಿಮಿತ್ತ ಮಾತ್ರ, ಅವನು ತಾನು ಅನುಭವಿಸಿದಂತೆ ಚಿತ್ರಿಸಬೇಕು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಲಜಾ ಶೇಖರ್ ವಿರಚಿತ “ನೆಲಮುಗಿಲು ಕವನ ಸಂಕಲನ ಮೊದಲ ಪ್ರಯತ್ನದಲ್ಲೇ ಸದನ ಕದನ ಕವನ ಮಾರ್ಮಿಕವಾಗಿರುವುದು ಮಾತ್ರವಲ್ಲ ಅರ್ಥಪೂರ್ಣವೂ, ಸದನ ಕಲಾಪಗಳಿಗೆ ಹಿಡಿದ ಕನ್ನಡಿಯು ಆಗಿದೆ. ಇವರ ಲೇಖನಿಯಿಂದ ಸಮಾಜಕ್ಕೆ ದಾರಿದೀಪವಾಗಿಸುವಂಥ ಇನ್ನಷ್ಟು ಕೃತಿಗಳು ಬರಲಿ ಎಂದು ಶುಭಹಾರೈಸಿದರು.
ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಲಕಾಳಪ್ಪ ಮಾತನಾಡಿ, ಶುಭ ಹಾರೈಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಜಲಜ ಶೇಖರ್ ಅವರ ಕವನ ಸಂಕಲನ, ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲೂ ವಿಸ್ತರಿಸಲಿ ಎಂದರು.
ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ.ವಿಜೇತ್, ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಹಾಜರಿದ್ದರು.
ಜೆ.ಸಿ.ಶೇಖರ್ ಸ್ವಾಗತಿಸಿದರು, ಮಂಜುಳಾ ನಿರೂಪಿಸಿದರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ವಂದಿಸಿದರು.