ನಾಪೋಕ್ಲು ಆ.4 : ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಅಧಿಕಾರಿವರ್ಗದವರು ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿರುವವರು ಜನಸಾಮಾನ್ಯರ ಕಷ್ಟವನ್ನು ಅರಿತು ಅದನ್ನು ನಿವಾರಿಸಲು ಬದ್ಧರಾಗಿರಬೇಕೆಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲು ಹಳೇತಾಲೂಕುವಿನ ಶ್ರೀ ಭಗವತಿ ಸಮುದಾಯ ಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಪಿಂಚಣಿ ಆದೇಶ ಪ್ರತಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜನರ ಸಮಸ್ಯೆಯನ್ನು ನಿವಾರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಹಲವಾರು ವ್ಯಕ್ತಿಗಳನ್ನು ನೇಮಿಸಿದೆ. ಆದರೆ ಅದನ್ನು ಆಡಳಿತ ಕಾರ್ಯಾಂಗದವರು ಕಾರ್ಯಪ್ರವೃತ್ತರಾಗಿ ಜನರಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡಬೇಕೆಂದರು.
ಕ್ಷೇತ್ರದಲ್ಲಿ ವಸತಿ, ರಸ್ತೆ ಕಾಮಗಾರಿ, ಆಸ್ಪತ್ರೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ಉನ್ನತಿಗೇರಿಸಬೇಕು. ಕಂದಾಯ ಇಲಾಖೆಯಲ್ಲಿ ಒಂದು ಕ್ರಾಂತಿಯನ್ನೇ ತರುವಂತ ಸಮಸ್ಯೆಗಳು ನಮ್ಮ ಕ್ಷೇತ್ರದಲ್ಲಿ ಕಾಡುತ್ತಿದೆ. ಇದನ್ನು ಬಗೆಹರಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಪೂರ್ವಕವಾಗಿ ನನ್ನೊಂದಿಗೆ ಕೈಜೋಡಿಸಬೇಕು ಎಂದರು.
ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಮಾತನಾಡಿ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ, ಒಂದೊಂದು ಪ್ರಾಂತ್ಯಕ್ಕೆ ಒಂದೊಂದು ಸಮಸ್ಯೆ ಇದೆ. ಖಾತೆ ವರ್ಗಾವಣೆ, ಪಟ್ಟೆದಾರರ ಹಕ್ಕು ಪತ್ರ, ಸಾಗುವಳಿ ಸಮಸ್ಯೆಗಳಿವೆ, ಅದನ್ನು ಭಾಷಣದ ಮೂಲಕ ನಾನು ತಿಳಿಸುವುದಿಲ್ಲ, ಎಲ್ಲಾ ಸಂದರ್ಭದಲ್ಲಿ ನಾನು ಲಭ್ಯವಿರುತ್ತೇನೆ. ನೀವೆಲ್ಲರೂ ನನ್ನ ಕಚೇರಿಗೆ ಬಂದು ಭೇಟಿಯಾಗಿ ಅಂತ ನಾನು ಕೇಳಿಕೊಳ್ಳುವುದಿಲ್ಲ. ತಿಂಗಳಲ್ಲಿ 15 ದಿನಕ್ಕೊಮ್ಮೆ ಪ್ರತಿ ಹೋಬಳಿಗೆ ನಾನೇ ಭೇಟಿ ನೀಡುತ್ತೇನೆ. ಅಲ್ಲಿನ ಸಮಸ್ಯೆಗಳನ್ನು ಕಂದಾಯ ಪರಿವೀಕ್ಷಕರ ಗಮನಕ್ಕೆ ತಂದು ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಪಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮರಂದೋಡ, ನರಿಯಂದಡ ಗ್ರಾಮದ 3 ಜನರಿಗೆ ಸಾಗುವಳಿ ಪತ್ರ ಹಾಗೂ ನಾಪೋಕ್ಲು ಹೋಬಳಿ ವ್ಯಾಪ್ತಿಯ 52 ಜನ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು.
:: ಶಾಸಕರಿಗೆ ಸನ್ಮಾನ :: ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಕಂದಾಯ ಇಲಾಖೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಾಪೋಕ್ಲು ಗ್ರಾ.ಪಂ ಅಧ್ಯಕ್ಷೆ ಎಚ್.ಎಸ್ ಪಾರ್ವತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್, ಉಪತಹಶೀಲ್ದಾರ್ ಸುನಿಲ್ ಕುಮಾರ್, ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗರು, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸತೀಶ್, ಪಂಚಾಯತ್ ಇಂಜಿನಿಯರ್ ಜವರೇಗೌಡ, ಅಶೋಕ್, ಜಿಲ್ಲಾ ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರೆಹ್ಮಾನ್ ಗ್ರಾ.ಪಂ.ಉಪಾಧ್ಯಕ್ಷ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಕುಶು ಕುಶಾಲಪ್ಪ, ನಾಪೋಕ್ಲು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿರಾಜ್, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಗ್ರಾ.ಪಂ ಸದಸ್ಯರು, ನಾಪೋಕ್ಲು ಕಂದಾಯ ಇಲಾಖೆಯ ಸಿಬ್ಬಂದಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು