ಮಡಿಕೇರಿ ಆ.4 : ಜಿಲ್ಲೆಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು, ತಕ್ಷಣ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಪಕ್ಷದ ಜಿಲ್ಲಾಧ್ಯಕ್ಷರು ಭೋಜಣ್ಣ ಸೋಮಯ್ಯ ಅವರ ನೇತೃತ್ವದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರು ದಿಲೀಪ್ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ವಿದ್ಯುತ್ ಅಡಚಣೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಮುಂಗಾರು ಆರಂಭಕ್ಕೂ ಮೊದಲೇ ಸೆಸ್ಕ್ ಇಲಾಖೆಯವರು ವಿದ್ಯುತ್ ರಸ್ತೆಬದಿಗಳಲ್ಲಿ ಮತ್ತು ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಹೊಂದಿಕೊಂಡಿರುವ ಮರಗಳನ್ನು ತೆರವು ಗೊಳಿಸಬೇಕು, ಅದರಂತೆ ಹಳೆಯ ಕಂಬಗಳನ್ನು ಬದಲಿಸಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಪೂರ್ವ ಸಿದ್ಧತೆಗಳನ್ನು ನಡೆಸಬೇಕಾಗಿತ್ತು. ಆದರೆ ನಾಪೋಕ್ಲು ವಿಭಾಗದಲ್ಲಿ ಇದರಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆರುವುದರಿಂದ ಸಣ್ಣ ಮಳೆಗೆ ವಿದ್ಯುತ್ ಕಡಿತಗೊಂಡು ಜನರು ವಿದ್ಯುತ್ ಸಮಸ್ಯೆಯನ್ನು ಎದುರಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಹುತೇಕ ಎಲ್ಲಾ ಕಡೆ ವಿದ್ಯುತ್ ಸಮಸ್ಯೆಯಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಈ ಸಮಸ್ಯೆ ಮುಂಗಾರು ಪ್ರವೇಶಕ್ಕೂ ಮೊದಲೇ ಸೃಷ್ಟಿಯಾಗಿದ್ದು, ಹಳ್ಳಿಗಳಲ್ಲಿ ದಿನನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಇದರಿಂದ ಗೃಹ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟುಹೋಗಿ ಜನರು ನಷ್ಟ ಅನುಭವಿಸುವಂತಾಗಿದೆ.
ಮುಂದಿನ ದಿನಗಳಲ್ಲಿ ಈ ರೀತಿಯ ವಿದ್ಯುತ್ ವ್ಯತ್ಯಯ ಮುಂದುವರಿದರೆ ಜಿಲ್ಲಾದ್ಯಂತ ಚೆಸ್ಕಾಂ ಕಛೇರಿಗೆ ಎಎಪಿ ಕಾರ್ಯಕರ್ತರಿಂದ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಪಕ್ಷದ ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ. ಸಂಘಟನಾ ಕಾರ್ಯದರ್ಶಿ ಎಂ.ಕೆ.ಅಪ್ಪಯ್ಯ, ಸಿ.ಎಸ್ ರವೀಂದ್ರ ಮತ್ತು ಇತರ ಮುಖಂಡರು ಇದ್ದರು.