ಮಡಿಕೇರಿ ಆ.9 : “ವಿಶ್ವ ಆದಿಮಸಂಜಾತ ಸ್ಥಳೀಯ ಜನರ” ಅಂತರಾಷ್ಟ್ರೀಯ ದಿನದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿತು.
ಧರಣಿಯ ನೇತೃತ್ವ ವಹಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವ ಸ್ವಯಂ ನಿರ್ಣಯ ಹಕ್ಕು ಮತ್ತು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆಯನ್ನು ಒಳಗೊಂಡ ವಿವಿಧ ರಾಜ್ಯಾಂಗದತ್ತ ಹಕ್ಕುಗಳ ಬೇಡಿಕೆಗಳ ಕುರಿತು ಸರ್ಕಾರಗಳು ಸೂಕ್ತ ಸ್ಪಂದನೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಕೊಡವರು ವಿಶಿಷ್ಟವಾದ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯನ್ನು ಹೊಂದಿರುವ ಬುಡಕಟ್ಟು ಜನಾಂಗದವರಾಗಿದ್ದಾರೆ. ವಿಭಿನ್ನ ಭಾಷೆ ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ಸಾಂಪ್ರದಾಯಿಕವಾಗಿ ಅವರು ಕೊಡವ ಭೂಮಿಯಲ್ಲೇ ಉಳಿದುಕೊಂಡಿದ್ದಾರೆ. ನಂಬಿಕೆ ಮತ್ತು ಸಂಸ್ಕೃತಿಯನ್ನು ತಮ್ಮ ಹೊಸ ಪೀಳಿಗೆಗೆ ರವಾನಿಸಿದ್ದಾರೆ. ಈ ರೀತಿಯ ವಿಶಿಷ್ಟ ಮತ್ತು ಅತಿಸೂಕ್ಷ್ಮ ಜನಾಂಗದ ಹಕ್ಕುಗಳನ್ನು ಆಡಳಿತ ವ್ಯವಸ್ಥೆ ಮುಂದೆ ಪ್ರತಿಪಾದಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಸ್ಥಳೀಯ ಜನರ ಹಕ್ಕುಗಳ ಕುರಿತು ವಿಶ್ವ ರಾಷ್ಟ್ರಸಂಸ್ಥೆ (UNDRIP) 2007 ಸೆಪ್ಟಂಬರ್ ನಲ್ಲಿ UN ಜನರಲ್ ಅಸೆಂಬ್ಲಿ ಆದಿಮಸಂಜಾತ ಸ್ಥಳೀಯರ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಈ ಘೋಷಣೆಯು ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುತ್ತದೆ. ಸಾಂಪ್ರದಾಯಿಕ ಜ್ಞಾನ ಮತ್ತು ಸಂಪನ್ಮೂಲಗಳನ್ನು ಒಳಗೊಂಡಂತೆ ಅವರ ಸಾಮೂಹಿಕ ಜೈವಿಕ-ಸಾಂಸ್ಕೃತಿಕ ಪರಂಪರೆ, ಪ್ರಾಂತ್ಯಗಳು, ಮತ್ತು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಮತ್ತು ಸಾಂಪ್ರದಾಯಿಕ ಕಾಯ್ದೆಗಳನ್ನು ಕಾನೂನುಬದ್ಧವಾಗಿ, ಭಾರತ ಸೇರಿದಂತೆ 146 ದೇಶಗಳು ಈ ಘೋಷಣೆಯನ್ನು ಅಂಗೀಕರಿಸಿವೆ.
26ನೇ ವಿಧಿಯು ಸ್ಥಳೀಯ ಜನರಿಗೆ ಭೂಮಿಯ ಹಕ್ಕಿದೆ ಎಂದು ಹೇಳುತ್ತದೆ. ಭೂಪ್ರದೇಶಗಳು ಮತ್ತು ಅವರ ಸಾಂಪ್ರದಾಯಿಕ ಒಡೆತನದ, ಆಕ್ರಮಿಸಿಕೊಂಡ ಅಥವಾ ಇತರ ಸಂಪನ್ಮೂಲಗಳನ್ನು ಹೊಂದಲು, ಬಳಸಲು, ಅಭಿವೃದ್ಧಿಪಡಿಸಲು ಮತ್ತು ನಿಯಂತ್ರಿಸಲು ಅವರಿಗೆ ಹಕ್ಕಿದೆ. 32ನೇ ವಿಧಿಯಂತೆ ಸ್ಥಳೀಯ ಜನರು ಆದ್ಯತೆಗಳನ್ನು ನಿರ್ಧರಿಸುವ ಮತ್ತು ಅಭಿವೃದ್ಧಿಪಡಿಸುವ ಹಕ್ಕನ್ನು ಹೊಂದಿದ್ದಾರೆ.
ಸಿಎನ್‍ಸಿ ಸಂಘಟನೆ ಕೊಡವಲ್ಯಾಂಡ್‍ಗಾಗಿ ಶ್ರಮಿಸುತ್ತಿದೆ, ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಮತ್ತು ಮಿನಿಸ್ಕ್ಯೂಲ್ ಮೈಕ್ರೋ ಕೊಡವ ಜನಾಂಗೀಯ ಬುಡಕಟ್ಟು ಕುಲಕ್ಕೆ ಎಸ್‍ಟಿ ಟ್ಯಾಗ್ ಪ್ರತಿಪಾದಿಸುತ್ತ ಕಳೆದ 33 ವರ್ಷಗಳಿಂದ ಹಕ್ಕೊತ್ತಾಯ ಮಂಡಿಸುತ್ತಾ ಬಂದಿದೆ ಎಂದರು.
ಕೊಡವರು ಕೊಡಗಿಗೆ ಸಿಮೀತವಾದ ಜನರಾಗಿದ್ದು, ಹೊರಗೆ ಎಲ್ಲಿಯೂ ಕೊಡವರಿಗೆ ತಾಯಿ ಬೇರಿಲ್ಲ. ಆದಿಮಸಂಜಾತ ಜನರಾಗಿರುವ ಕೊಡವರು, ಭೂಮಿ ಸೃಷ್ಟಿಯಾದ ದಿನದಿಂದಲೂ ಕೊಡಗನ್ನು ತಮ್ಮ ಅವಿಭಾಜ್ಯ ಮತ್ತು ಸಾಂಪ್ರದಾಯಿಕ ಜನ್ಮಭೂಮಿಯನ್ನಾಗಿ ಪಡೆದಿದ್ದಾರೆ. ಆದ್ದರಿಂದ ಭಾರತದ ಈಶಾನ್ಯ ಪ್ರಾಂತ್ಯದಲ್ಲಿ 10 ಸ್ವಾಯತ್ತ ಪ್ರದೇಶಗಳಿಗೆ ಸಮಾನವಾಗಿ ಸ್ವಯಂ ನಿರ್ಣಯದ ಹಕ್ಕನ್ನು ಕೊಡವರಿಗೂ ಅಳವಡಿಸಬೇಕು. ಆದಿವಾಸಿ ಮೂಲನಿವಾಸಿ ಕೊಡವ ಜನಾಂಗವನ್ನು ನಮ್ಮ ಸಂವಿಧಾನದ ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು.
ಕೊಡವ ಜನಾಂಗದ ನಿಖರವಾದ, ಸಮಗ್ರ ಜನಾಂಗೀಯ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಕೊಡವ ಸಾಂಪ್ರದಾಯಿಕ ಕಾಯ್ದೆಯಂತೆ ಜನಾಂಗೀಯ “ಧಾರ್ಮಿಕ ಸಂಸ್ಕಾರ ಗನ್” ಹಕ್ಕುಗಳನ್ನು ರಕ್ಷಿಸಬೇಕು. ಈ ಹಕ್ಕು ಸಂವಿಧಾನದ 25 ಮತ್ತು 26 ನೇ ವಿಧಿಗಳಲ್ಲಿ ರಕ್ಷಿಸಲ್ಪಟ್ಟ ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿದೆ.
ಕೊಡವ ತಕ್ಕ್ (ಭಾಷೆ) ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು, ಸಂವಿಧಾನದ 347, 350, 350A ಮತ್ತು 350B ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಪರಿಚಯಿಸಬೇಕು. ಸೊಬಗಿನ ಶೋಭಯಮಾನವಾದ ಕೊಡವ ಜಾನಪದ ಪರಂಪರೆಯನ್ನು ಅಮೂರ್ತ ಸಂಸ್ಕೃತಿಯಲ್ಲಿ ಸೇರಿಸಬೇಕು. ಯುನೆಸ್ಕೋದ ಪರಂಪರೆ ಪಟ್ಟಿಯಲ್ಲಿ ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ಸರ್ಕಾರ ಕಾರ್ಯಕ್ರಮ ಒದಗಿಸಬೇಕು. ವಿಶ್ವ ಕೊಡವಾಲಜಿ ಸಂಶೋಧನಾ ಕೇಂದ್ರ ಮತ್ತು ಕೊಡವ ಅಡ್ವಾನ್ಸ್ಡ್ ಶಿಕ್ಷಣ ಕೇಂದ್ರವನ್ನು/ ಅಧ್ಯಯನ ಕೇಂದ್ರ ಸ್ಥಾಪಿಸಲು ನಮಗೆ ಸರ್ಕಾರಿ ಭೂಮಿ ನೀಡಬೇಕು.
ಲೈಫ್‍ಲೈನ್ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿ”ಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. (ಕಾವೇರಿ ವೇದಕಾಲದ 7 ಪವಿತ್ರ ನದಿಗಳಲ್ಲಿ ಒಂದು) ಜೀವಜಲ ಕಾವೇರಿಯ ಜನ್ಮಸ್ಥಳ ತಲಕಾವೇರಿಯು ಕೊಡವ ಜನಾಂಗದ ಪವಿತ್ರ ಯಾತ್ರಾ ಕೇಂದ್ರವಾಗಿದೆ. ಯಹೂದಿ ಜನರ ಮೌಂಟ್ ಮೊರೈಯಾ ದೇವಾಲಯದ ಮಾದರಿಯಲ್ಲಿ ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ರಕ್ಷಿಸಬೇಕು. ಕಾವೇರಿಯ ಪ್ರಮುಖ ನೀರಿನ ಪಾಲು 1966 ರ ಹೆಲ್ಸಿಂಕಿ ನಿಯಮದ ಪ್ರಕಾರ ಅದು ಹುಟ್ಟುವ ಸ್ಥಳವಾದ ಕೊಡವಲ್ಯಾಂಡ್ ಬಳಸಬೇಕು. ವಾರ್ಷಿಕ 740 ಟಿಎಂಸಿಯಲ್ಲಿ ಕಾವೇರಿ ನೀರಿನ ಇಳುವರಿಯಾಗಿದ್ದು, ಕೊಡಗಿನ ಉತ್ಪಾದನೆ 200 ಟಿಎಂಸಿಗಿಂತ ಹೆಚ್ಚು ಎಂದರು.
ನಾಲ್ನಾಡಿನ ಅರಮನೆಯ ಮತ್ತು ಮಡಿಕೇರಿ ಕೋಟೆ ಅರಮನೆ ಸಂಚಿನಲ್ಲಿ ನಡೆದ ಕೊಡವರ ರಾಜಕೀಯ ಹತ್ಯೆಗಳ ಸ್ಮಾರಕಗಳು ನಿರ್ಮಾಣಗೊಳ್ಳಬೇಕು.
ಉಲುಗುಲಿ ಸುಂಟಿಕೊಪ್ಪದಲ್ಲಿ ಮುಳ್ಳುಸೋಗೆ ಗಳಲ್ಲಿ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ಮತ್ತು ನಮ್ಮ ಸಂವಿಧಾನ 49ರ ವಿಧಿ ಮತ್ತು ವೆನಿಸ್ ಘೋಷಣೆ 1964ರ ಅನ್ವಯ ಅಂತರಾಷ್ಟ್ರೀಯ ಕೊಡವ ನರಮೇಧ ಸ್ಮಾರಕ ದೇವಾಟ್‍ಪರಂಬ್‍ನಲ್ಲಿ ನಿರ್ಮಿಸಬೇಕು. ಎರಡೂ ದುರಂತಗಳನ್ನು ಅಂತರರಾಷ್ಟ್ರೀಯ ಹತ್ಯಾಕಾಂಡದ ಸ್ಮರಣೆಯಲ್ಲಿ ಸೇರಿಸಬೇಕು.
ದೇವಾಟ್‍ಪರ್‍ಂಬ್ ಕೊಡವ ಜನಾಂಗದ ಪ್ರಾಚೀನ ಯುದ್ಧಭೂಮಿಯಾಗಿದೆ ಮತ್ತು ಇದು ದೇಶ ಮಂದ್ ಆಗಿದೆ ಇದನ್ನು ಪ್ರಾಚೀನ ಸಮರರಂಗ ಸಮಾನ ಪ್ರಾಮುಖ್ಯತೆಯಾಗಿ ಸಂರಕ್ಷಿಸಬೇಕು. ಕುರುಕ್ಷೇತ್ರ, ಕಳಿಂಗ ಮತ್ತು ವಾಟರ್‍ಲೂ ಮುಂತಾದ ಸಮರರಂಗಳು ಪಾರಂಪರಿಕ ತಾಣಗಳಾಗಿವೆ. ಜನಸಂಖ್ಯಾ ಪಲ್ಲಟವನ್ನು ತಡೆಗಟ್ಟಲು, ನಮ್ಮ ಅನುವಂಶಿಕ ಪಾರಂಪರಿಕ ಕುಲದ ಭೂಮಿಯನ್ನು ರಕ್ಷಿಸಬೇಕು. “ಹೊಸ ಸಂಸತ್ತಿನಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು, ನಮ್ಮ ಆಧ್ಯಾತ್ಮಿಕ-ಪಾರಮಾರ್ತಿಕ ಭೂಮಿಗಳಾದ ಮಂದ್, ದೇವಕಾಡ್, ತೂಟ್‍ಂಗಳ, ಕ್ಯಾಕೋಳ, ಇತ್ಯಾದಿಗಳು ಹಾಗೂ ಕೊಡವ ಜನ್ಮಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆಗಾಗಿ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಸಾಲಿನಲ್ಲಿ ಇನ್ನರ್ ಲೈನ್ ಪರ್ಮಿಟ್ (ILP)ಯ ಖಾತರಿಯನ್ನು ಕೋರುತ್ತದೆ ಎಂದು ನಾಚಪ್ಪ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ|| ನಂಜುಂಡೇಗೌಡ ಅವರ ಮೂಲಕ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಸಲ್ಲಿಸಿದರು. ಸತ್ಯಾಗ್ರಹದಲ್ಲಿ ಕೊಡವ ಸಾಂಪ್ರದಾಯಿಕ ಪುರಾತನ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.
ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತ, ಕೂಪದಿರ ಪುಷ್ಪ, ಮುತ್ತಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಪಟ್ಟಮಾಡ ಕುಶ, ಚಂಬಂಡ ಜನತ್, ಕಾಂಡೇರ ಸುರೇಶ್, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ನಂದಿನೆರವಂಡ ವಿಜು, ಮಣೊಟಿರ ಚಿಣ್ಣಪ್ಪ, ಕಿರಿಯಮಾಡ ಶರಿನ್ ಪುಟ್ಟಿಚಂಡ ದೇವಯ್ಯ, ಪುಲ್ಲೇರ ಕಾಳಪ್ಪ, ಅಳಮಂಡ ಜೈ, ಮಂದಪಂಡ ಮನೋಜ್, ಪಾರುವಂಗಡ ನವೀನ್, ಚೋಳಪಂಡ ನಾಣಯ್ಯ, ಕೂಪದಿರ ಸಾಬು, ಬೊಟ್ಟಂಗಡ ಜಪ್ಪು, ಪುದಿಯೊಕ್ಕಡ ಕಾಶಿ, ಮಣೊಟಿರ ಜಗದೀಶ್, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ದಿನೇಶ್, ಅಜ್ಜಿನಕಂಡ ಸನ್ನಿ ಮಾಚಯ್ಯ, ಬಡುವಂಡ ವಿಜಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.