ಮಡಿಕೇರಿ ಆ.11 : ಭಾರತ ಸೇವಾದಳದ ಕೊಡಗು ಜಿಲ್ಲಾ ಸಮಿತಿ, ಮಡಿಕೇರಿ ತಾಲ್ಲೂಕು ಸಮಿತಿ ಮತ್ತು ಮಡಿಕೇರಿ ತಾ.ಪಂ ಪಂಚಾಯ್ತಿ ವತಿಯಿಂದ ತಾಲ್ಲೂಕು ವ್ಯಾಪ್ತಿಯ ಗ್ರಾ.ಪಂ ಸಿಬ್ಬಂದಿಗಳಿಗೆ ಕ್ವಿಟ್ ಇಂಡಿಯಾ ಚಳುವಳಿ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನದ ಕುರಿತು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಭಾರತ ಸೇವಾದಳದ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರು.
ಪ್ರಜೆಗಳಲ್ಲಿ ದೇಶಾಭಿಮಾನ, ಜಾತ್ಯಾತೀತತೆ, ಮಾನವೀಯತೆ ಮತ್ತು ಸಾಮಾಜಿಕ ಕಳಕಳಿಯ ಗುಣಗಳನ್ನು ಬೆಳೆಸುತ್ತಾ ಬಂದಿರುವ ಸೇವಾದಳ ಉತ್ತಮವಾದ ಕಾರ್ಯಾಗಾರವನ್ನು ಆಯೋಜಿಸಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ರೇವಣ್ಣ ಜಿ.ಈ ಪ್ರಾಸ್ತವಿಕವಾಗಿ ಮಾತನಾಡಿ ರಾಷ್ಟ್ರಧ್ವಜದ ಮಹತ್ವ ಮತ್ತು ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ವಿವರಿಸಿದರು.
ರಾಷ್ಟ್ರಧ್ವಜದ ನೀತಿ ಸಂಹಿತೆ ಕುರಿತು ಸೇವಾದಳದ ಸದಸ್ಯರಾದ ರೇವತಿ, ರಾಷ್ಟ್ರಧ್ವಜ ಕಟ್ಟುವ ರೀತಿಯನ್ನು ಸದಸ್ಯ ಕರುಂಬಯ್ಯ ತಿಳಿಸಿದರು. ಜಿಲ್ಲಾ ಸಮಿತಿ ಕೋಶಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಕಾರ್ಯಾಗಾರದ ಮಹತ್ವದ ಬಗ್ಗೆ ಮಾತನಾಡಿದರು.
ಸೇವಾದಳದ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಶ್ರೀದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಮೋಂತಿ ಗಣೇಶ್ ಉಪಸ್ಥಿತರಿದ್ದರು. ಸಂಪನ್ಮೂಲ ಶಿಕ್ಷಕರಾದ ರಂಗಸ್ವಾಮಿ ಎ.ಅರ್ ನಿರೂಪಿಸಿ, ಕರುಂಬಯ್ಯ ವಂದಿಸಿದರು.








