ಮಡಿಕೇರಿ ಆ.14 : ಕೊಡಗು ಪ್ರೆಸ್ ಕ್ಲಬ್, ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ “ಕದನ ಕಲಿಗಳಿಗೆ ಗೌರವ” ಕಾರ್ಯಕ್ರಮ ನಡೆಯಿತು.
ನಗರದ ಕೊಹಿನೂರು ರಸ್ತೆಯಲ್ಲಿರುವ ರೆಡ್‍ಬ್ರಿಕ್ಸ್ ಇನ್‍ನ ಸತ್ಕಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಏರ್ ಮಾರ್ಷಲ್ ನಂದ ಕಾರ್ಯಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಒಬ್ಬ ಉತ್ತಮ ಸೇನಾನಿ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸಲು ಧನಾತ್ಮಕ ಚಿಂತನೆ, ಸಮಗ್ರತೆ, ಸ್ವಯಂ ನಿಯಂತ್ರಣವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.
ಈಗಾಗಲೇ ಮಾಜಿ ಸೈನಿಕರ ಕುಂದುಕೊರತೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನದಲ್ಲಿದ್ದು, ಅವರು ಸ್ಪಂಧಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಯೋಧರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಸಂತೋಷದಾಯಕ ವಿಚಾರ ಎಂದು ಶ್ಲಾಘೀಸಿದರು.
ರಾಷ್ಟ್ರಪತಿಗಳ ಗೌರವ ಚಿಕಿತ್ಸಕರು, ಆಸ್ಪತ್ರೆ ಸೇವಾ ವಿಭಾಗ ಮತ್ತು ಮುಖ್ಯ ಸಮಾಲೋಚಕರು, ಮಾಜಿ ಮಹಾ ನಿರ್ದೇಶಕರಾದ ಲೆ/ಜ/ ಡಾ. ಬಿ.ಎನ್ ಬಿ.ಎಂ.ಪ್ರಸಾದ್ ಮಾತನಾಡಿ, ಸಮವಸ್ತ್ರದಲ್ಲೇ ದೇಶ ಸೇವೆ ಮಾಡಬೇಕೆಂದೇನಿಲ್ಲ, ವಿದ್ಯಾಭ್ಯಾಸ ಹಾಗೂ ಜೀವನದ ಅನೇಕ ಕ್ಷೇತ್ರದಲ್ಲಿ ಪ್ರಾಮಾಣಿಕ, ಪಾರದರ್ಶಕ, ಶಿಸ್ತಿನ ಕರ್ತವ್ಯ ನಿರ್ವಹಿಸಿ ಕೀರ್ತಿತರುವಂತಾಗಬಹುದು ಎಂದು ಹೇಳಿದರು.
ನಿವೃತ್ತ ಯೋಧರು ದೇಶದ ಆಸ್ತಿ, ಅವರ ನಿವೃತ್ತಿ ಜೀವನದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳಿಗೆ ಜಿಲ್ಲಾಧಿಕಾರಿ ಹೆಚ್ಚು ತ್ವರಿತವಾಗಿ ಸ್ಪಂದಿಸಲೆದು ಕರೆ ನೀಡಿದರು.
ಕೊಡಗು ಪ್ರೆಸ್ ಕ್ಲಬ್ ಪ್ರತಿ ತಿಂಗಳು ಜನಮುಖಿ, ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ನಿವೃತ್ತಯೋಧರನ್ನು ಗೌರವಿಸುವ ಕೆಲಸವನ್ನು ಮಾಡಿರುವುದು ಪ್ರಶಂಸನೀಯ, ಅನುಕರಣೀಯ ಎಂದರು.
ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಕೊಡಗು ವೀರರ ಭೂಮಿ. ತ್ಯಾಗ ಬಲಿದಾನ ಮಾಡಿದ ಅನೇಕ ಯೋಧರು ಕೊಡಗಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾರ್ಗೀಲ್ ಕದನದ ಸಂದರ್ಭ ವೀರ ಮರಣವನ್ನಪ್ಪಿದ ಕೊಡಗಿನ ಯೋಧರ ಪಾರ್ಥಿವ ಶರೀರ ಜಿಲ್ಲೆಗೆ ಆಗಮಿಸಿದಾಗ ಪ್ರತಿಯೊಬ್ಬರು ತಮ್ಮ ಮನೆಯ ವ್ಯಕ್ತಿಯಂತೆ ಶ್ರದ್ಧಾಂಜಲಿ ಸಲ್ಲಿಸಿರುವುದು ಅವಿಸ್ಮರಣೀಯ.
ದೇಶದ ಜನರನ್ನು ಜೀವದ ಹಂಗನ್ನು ತೊರೆದು ರಕ್ಷಣೆ ಮಾಡುವ ಕಾರ್ಯವನ್ನು ಸೈನಿಕರು ಮಾಡುತ್ತಾರೆ. ತಮ್ಮ ಮುಂದಿನ ಭವಿಷ್ಯದ ಬಗ್ಗೆ ಅರಿವು ಇಲ್ಲದಿದ್ದರು ದೇಶ ಸೇವೆ ಒಂದೇ ಎಂದು ಕಾರ್ಯನಿರ್ವಹಿಸುವ ಯೋಧರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವರ ಈ ತ್ಯಾಗ ಮನೋಭವ ಶ್ಲಾಘನೀಯ. ಅವರನ್ನು ಪ್ರತಿದಿನ ನೆನಪಿಸಿಕೊಳ್ಳುವ ಕಾರ್ಯ ಆಗಬೇಕು ಎಂದರು.
ಗಡಿ ಪ್ರದೇಶದ ವಾತಾವರಣದ ದುಸ್ಥಿತಿಯಲ್ಲಿ ಗಡಿಯನ್ನು ರಕ್ಷಣೆ ಮಾಡುತ್ತಾರೆ. ಅಂತಹ ಯೋಧರು ತಮ್ಮ ರಜೆದಿನಗಳನ್ನು ಮುಗಿಸಿ ತೆರಳುವ ಸಂದರ್ಭ ಅವರ ಪೋಷಕರು, ಪತ್ನಿ, ಮಕ್ಕಳು ಬೀಳ್ಕೊಡುವುದು ಅನಿಶ್ಚಿತ.
ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಇದು ಸಾರ್ತಕವಾದ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ ಮಾತನಾಡಿ, ವೀರಯೋಧರು ತಮ್ಮ ಬದುಕನ್ನು ದೇಶಸೇವೆಗೆ ಮುಡುಪಾಗಿಟ್ಟಿದ್ದಾರೆ. ಅವರ ನಿಸ್ವಾರ್ಥ ಸೇವೆ ವಿಶಿಷ್ಟ. ಅವರಿಗೆ ನಿರಂತರ ಗೌರವ ಸಲ್ಲಿಸುವಂತಾಗಬೇಕು. ಜೀವದ ಹಂಗು ತೊರೆದು ದೇಶದ ಗಡಿಗಳನ್ನು ಕಾಯ್ದು ನಿವೃತ್ತರಾಗಿ ಜಿಲ್ಲೆಯಲ್ಲಿ ಬಂದು ನೆಲೆಸಿರುವ ಮಾಜಿ ಸೈನಿಕರಿಗೆ ಹಲವು ಸೌಲಭ್ಯ ಕಲ್ಪಿಸುವ ಮೂಲಕ ಯೋಧರು ನಿವೃತ್ತಿಯ ನಂತರವು ಭದ್ರತೆಯಿಂದ ಜೀವನ ಕಳೆಯುವಂತಾಗಬೇಕು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾಫಿ,ಸೇನೆ,ಕ್ರೀಡೆ ಗೆ ಹೆಸರುವಾಸಿಯಾಗಿರುವ ಕೊಡಗು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ದೇಶದಲ್ಲೆ ಮಾದರಿ ಎನಿಸಿಕೊಂಡಿದೆ.
ಕೊಡಗಿನ ಹಾಕಿ ಪರಂಪರೆಗೆ ಯೋಧರು ಮುನ್ನುಡಿ ಬರೆದಿದ್ದು, ಹೆಮ್ಮೆಯ ವಿಚಾರ. ಜೀವದ ಹಂಗು ತೊರೆದು ಸುದೀರ್ಘ ಸೇವೆ ಸಲ್ಲಿಸಿದ ನಿವೃತ್ತ ಯೋಧರು ಸೇವಾ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸಿ ಗುರುತಿಸಿಕೊಂಡಿದ್ದಾರೆ. ನಿವೃತ್ತಿಯ ನಂತರವೂ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕೊಡಗು ಪ್ರೆಸ್‍ಕ್ಲಬ್ 25 ವರ್ಷದ ಪೂರ್ಣಗೊಂಡಿದ್ದು, ಸಮಾಜಮುಖಿಯಾಗಿ ಕೆಲಸ ಮಾಡುತ್ತ ಎಲ್ಲಾ ವರ್ಗ, ಎಲ್ಲಾ ಭಾಗದ ಜನರನ್ನು ತಲುಪುವ ಕೆಲಸ ಮಾಡಿದೆ. ಮಾಧ್ಯಮ ಸಮಾಜದಲ್ಲಿ ನಡೆಯುವ ವಿದ್ಯಾಮಾನವನ್ನು ಕಟ್ಟಿಕೊಡುವ ಕೆಲಸ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ, ಕೊಡಗು ಸೈನಿಕರ ಜಿಲ್ಲೆ. ನಾನಾ ವಿಷಯಗಳಿಗೆ ಪ್ರಸಿದ್ಧ ಪಡೆದಿದೆ. ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಷ್ಟು ಮಾಜಿ ಸೈನಿಕರಿದ್ದು, ಇವರೆಲ್ಲ ನಿವೃತ್ತಿ ನಂತರವು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ.
ಜಿಲ್ಲೆಯಲ್ಲಿ ಜನರಲ್ ತಿಮ್ಮಯ್ಯ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಮ್ಯೂಸಿಯಂ ಹೊಂದಿದ್ದು, ಇದು ಜಿಲ್ಲೆಗೆ ಹೆಮ್ಮೆಯಾಗಿದೆ. ಸೈನಿಕ ಜಿಲ್ಲೆ ದೇಶಕ್ಕೆ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ನಂದ ಕಾರ್ಯಪ್ಪ, ಲೆ/ಜ/ ಡಾ. ಬಿ.ಎನ್ ಬಿ.ಎಂ ಪ್ರಸಾದ್, ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ, ಕರ್ನಲ್ ಪೋರೆಯಂಡ ಬಿ.ಅಯ್ಯಪ್ಪ, ಲೆ/ಕರ್ನಲ್ ಪುಟ್ಟಿಚಂಡ ಎಸ್ ಗಣಪತಿ, ಮೇಜರ್ ಬಿದ್ದಂಡ ಎ.ನಂಜಪ್ಪ, ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಮೇಜರ್ ದಿವಂಗತ ಮಂಗೇರಿರ ಮುತ್ತಣ್ಣ ಪರವಾಗಿ ಪತ್ನಿ ರೀನಾ ಮುತ್ತಣ್ಣ, ಕ್ಯಾಪ್ಟನ್ ಕಾಳಪಂಡ ಬೋಪಯ್ಯ (ಬೆಲ್ಲು), ಕ್ಯಾಪ್ಟನ್ ಹೊಸೋಕ್ಲು ಎಂ.ಚಿಣ್ಣಪ್ಪ, ಸಾಜೆಂಟ್ ಕಿಗ್ಗಾಲು ಎಸ್.ಗಿರೀಶ್, ನಾಯಕ್ ಸುಬೇದಾರ್ ಕೆ.ಜಿ.ಶಿವನ್, ಪ್ಯಾರ ಕಮಾಂಡೋ ಹವಾಲ್ದಾರ್ ಪೊಕ್ಕಳಿಚಂಡ ಮೋಹನ್, ಎಸ್‍ಎಫ್‍ಎನ್ ಎಂ.ಎಸ್.ಚಿಣ್ಣಪ್ಪ, ಹವಾಲ್ದಾರ್ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹವಾಲ್ದಾರ್ ಚಂದ್ರಕುಮಾರ್, ಹವಾಲ್ದಾರ್ ಅಮೆ ಜನಾರ್ದನ್, ಹವಲ್ದಾರ್ ಪಟ್ರಪಂಡ ಸೋಮೇಶ್ ಚಂಗಪ್ಪ, ಕೊಳೇರ ದಿವಂಗತ ನಾಯಕ್ ಸವಿನ್ ಪರವಾಗಿ ಅವರ ಮಾತೃಶ್ರೀ ಕೋಳೆರ ನಂಜಮ್ಮ, ನಾಯಕ್ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಸಿಪಾಯಿ ಕೆ.ಆರ್.ಸುನಿಲ್, ಸಿಪಾಯಿ ಮಾರ್ಚಂಡ ಗಣೇಶ್, ಕೊಟ್ಟುಕತ್ತಿರ ಜಾಲಿ ಸೋಮಣ್ಣ, ಬೊಟ್ಟಂಗಡ ಜಪ್ಪು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ ಸನ್ಮಾನಿತರ ಪರವಾಗಿ ಮಾತನಾಡಿದರು.
ಕುಟ್ಟ ಹಿರಿಯ ಪ್ರಾಥಮಿಕ ಶಾಲೆಯ ಅಲಿಮಾ ನೇತೃತ್ವದ ತಂಡ ಹಾಗೂ ಎಸ್‍ಎಂಎಸ್ ಶಾಲೆಯ ಮೈಥಿಲಿರಾವ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಹಾಡಿದರು.
ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ರೆಜಿತ್‍ಕುಮಾರ್ ಸ್ವಾಗತಿಸಿದರು. ಚೋಕಿರ ಅನಿತಾ ನಿರೂಪಿಸಿದರು. ಆನಂದ್ ಕೊಡಗು ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯಕ್ರಮ ಸಂಚಾಲಕ ಬೊಳ್ಳಜಿರ ಬಿ.ಅಯ್ಯಪ್ಪ ವಂದಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ಗೌರವದೊಂದಿಗೆ ನಿವೃತ್ತ ಯೋಧರನ್ನು ಬರಮಾಡಿಕೊಂಡರು.