
ಕುಶಾಲನಗರ ಮಾ.8 NEWS DESK : ಶಾಲಾ ಶಿಕ್ಷಣ ಇಲಾಖೆಯಡಿಯಲ್ಲಿ ಸಮಗ್ರ ಶಿಕ್ಷಣ – ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶನಾಲಯದ ಹೊಸ ಪರಿಕಲ್ಪನೆಯಡಿಯಲ್ಲಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯಲ್ಲಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕವನ್ನು ಸ್ಥಾಪಿಸುವ ಸಂಬಂಧವಾಗಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯಲ್ಲಿ ಸಂಸ್ಥೆಯ ಪ್ರಾಂಶುಪಾಲರೂ ಆದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ ) ರಾಮಚಂದ್ರರಾಜೇ ಅರಸ್ ಅವರ ಅಧ್ಯಕ್ಷತೆಯಲ್ಲಿ ಡಯಟ್ ಸಂಸ್ಥೆಯಲ್ಲಿ ಘಟಕದ ಪ್ರಥಮ ಸಭೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ನೀಡುವ ಸಲುವಾಗಿ ಜಿಲ್ಲಾಹಂತದ ಈ ಘಟಕವನ್ನು ಸ್ಥಾಪಿಸಿದ್ದು, ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಅನುಗುಣವಾಗಿ ವಿವಿಧ ತರಬೇತಿ ನೀಡುವ ಕುರಿತು ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದ ಘಟಕದ ಅಧ್ಯಕ್ಷರೂ ಆದ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್, ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯ ಹಾಗೂ ಆಸಕ್ತಿಗಳಿಗೆ ಅನುಗುಣವಾಗಿ ವೃತ್ತಿ ಪ್ರಪಂಚದ ಅರಿವು ಮತ್ತು ಆಯ್ಕೆಗಳ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉತ್ತಮ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಕ್ತ ತರಬೇತಿ ನೀಡಲಾಗುವುದು ಎಂದರು. ವೃತ್ತಿ ಮಾರ್ಗದರ್ಶನ ಯೋಜನಾ ಕಾರಗಯಕ್ರಮದಡಿ ನುರಿತ ತರಬೇತುದಾರರ ಮೂಲಕ ವೃತ್ತಿ ಮಾರ್ಗದರ್ಶಕರಾಗಿ ಶಿಕ್ಷಕರನ್ನು ಸಜ್ಜುಗೊಳಿಸುವುದು ವೃತ್ತಿ ಮಾರ್ಗದರ್ಶನ ಘಟಕದ ಉದ್ದೇಶವಾಗಿದೆ ಎಂದು ತಿಳಿಸಿದರು. 10ನೇ ತರಗತಿ ಹಾಗೂ 12ನೇ ತರಗತಿ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳಿಗೆ ವಿವಿಧ ಪ್ರವೇಶ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಪ್ರಾಂಶುಪಾಲರಾದ ರಾಮಚಂದ್ರರಾಜೇ ಅರಸ್ ತಿಳಿಸಿದರು. ವೃತ್ತಿ ಮಾರ್ಗದರ್ಶನ ಘಟಕದ ಸದಸ್ಯ ಕಾರ್ಯದರ್ಶಿ ಎಚ್.ಎಚ್.ಸತೀಶ್ , ವೃತ್ತಿ ಮಾರ್ಗದರ್ಶನದ ವಿವಿಧ ಚಟುವಟಿಕೆಗಳ ಕುರಿತು ಸಮಿತಿಯ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಜೆ.ನಾಗರಾಜ್,ಮಡಿಕೇರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಸಿ.ಕೆ.ಇಂದ್ರೇಶ್, ಮಡಿಕೇರಿ ಡಿಡಿಪಿಐ ಕಛೇರಿಯ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎ.ಸೌಮ್ಯ ಪೊನ್ನಪ್ಪ ಮಡಿಕೇರಿ ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಸ್. ಶರ್ಮಿಳಾ , ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರ ಉಪ ಪ್ರಾಂಶುಪಾಲ ಎ.ಸಿ.ಮಂಜುನಾಥ್, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಡಿ.ಕೆ.ಪ್ರಸನ್ನಕುಮಾರ್ ಇದ್ದರು.









