
ಮಡಿಕೇರಿ ಮಾ.7 NEWS DESK : ಕರ್ನಾಟಕ ಸರ್ಕಾರದ ಪ್ರಸ್ತುತ ಸಾಲಿನ ಮುಂಗಡ ಪತ್ರದಲ್ಲಿ ತಮ್ಮ ದಶಕಗಳ ಬೇಡಿಕೆ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾದ ಹಿನ್ನಲೆಯಲ್ಲಿ ಯುಕೊ ಸಂಘಟನೆಯು ಗೋಣಿಕೊಪ್ಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿತು. ಈ ಸಂದರ್ಭ ಬಜೆಟ್ ಅದಿವೇಶನ ಮುಗಿಸಿ ಗೋಣಿಕೊಪ್ಪಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಶಾಸಕ ಪತ್ನಿ ಕಾಂಚನ ಪೊನ್ನಣ್ಣ ಅವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಒಡ್ಡೋಲಗದೊಂದಿಗೆ ಉುಮಾಮಹೇಶ್ವರಿ ಪೆಟ್ರೋಲ್ ಬಂಕಿನಲ್ಲಿ ಸಿದ್ದಪಡಿಸಿದ್ದ ವೇದಿಕೆಗೆ ವೇದಿಕೆ ಕರೆ ತಂದ ಸಂಘಟನೆಯ ಪ್ರಮುಖರು ಶಾಸಕ ಪೊನ್ನಣ್ಣ ಹಾಗೂ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆ ಮಾಡ ಮಂಜು ಚಿಣ್ಣಪ್ಪ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘಟನೆಯ ಸಂಚಾಲಕ ಮಂಜು ಚಿಣ್ಣಪ್ಪ, ಶಾಸಕ ಎ.ಎಸ್.ಪೊನ್ನಣ್ಣ ಅವರ ಇಚ್ಛಾ ಶಕ್ತಿ ಹಾಗೂ ಕಾಳಜಿಯಿಂದಾಗಿ ಪ್ರಸಕ್ತ 2026-27ನೇ ಸಾಲಿನ ಮುಂಗಡ ಪತ್ರದಲ್ಲಿ ‘ಕೊಡವ ಅಭಿವೃದ್ದಿ ನಿಗಮ’ ಘೋಷಣೆಯಾಗುವುದರೊಂದಿಗೆ ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ದಶಕಗಳ ಹೋರಾಟಕ್ಕೆ ಯಶಸ್ಸು ಲಭಿಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಪೊನ್ನಣ್ಣ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಪ್ರಸ್ತುತ ಕೊಡವ ಸಮುದಾಯದಂತಹ ಅಲ್ಪ ಸಂಖ್ಯಾತ ಜನಾಂಗವು ಒಂದು ಬೇಡಿಕೆಯನ್ನು ಸರ್ಕಾರದಿಂದ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಸರ್ಕಾರದಲ್ಲಿ ಪೊನ್ನಣ್ಣನವರ ವೈಯಕ್ತಿಕ ವರ್ಚಸ್ಸು, ಹಾಗೂ ಕ್ಷೇತ್ರದ ಎಲ್ಲಾ ಸಮುದಾಯಗಳ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕಾಳಜಿಯಿಂದಾಗಿ ಮುಖ್ಯಮಂತ್ರಿಯನ್ನು ಮನವೊಲಿಸಿ ನಿಗಮ ಘೋಷಣೆ ಮಾಡಿಸಿಕೊಳ್ಳಲು ಸಾಧ್ಯವಾಯಿತು. ಅಭಿವೃದ್ಧಿ ನಿಗಮವು ಕೊಡಗು ಕರ್ನಾಟಕದೊಂದಿಗೆ ವಿಲೀನದ ನಂತರದಲ್ಲಿ ಕರ್ನಾಟಕ ಸರ್ಕಾರದಿಂದ ಕೊಡವರಿಗೆ ದೊರೆತ ಬಹು ದೊಡ್ಡ ಕೊಡುಗೆಯಾಗಿದೆ. ಆದ್ದರಿಂದ ಕೊಡವರ ಸಮಗ್ರ ಶ್ರೇಯೋಭಿವೃದ್ಧಿಗೆ ನಿಗಮವನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೊಡವರು ಇದನ್ನು ಮನೆ ಮನೆಗಳಲ್ಲಿ ಸಂಭ್ರಮಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಸಕ ಪೊನ್ನಣ್ಣ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಗೆದ್ದರೆ ಅಭಿವೃದ್ಧಿ ನಿಗಮ ಘೋಸಿಸುವುದಾಗಿ ಭರವಸೆ ನೀಡಿದ್ದ ಹಾಗೆ ಇಂದು ತಮ್ಮ ಭರವಸೆ ಈಡೆರಿಸಿದ್ದಾರೆ. ಈ ನಿಟ್ಟಿನಲ್ಲಿ ಯುಕೊ ಸಂಘಟನೆಯು ಶಾಸಕ ಪೊನ್ನಣ್ಣನವರನ್ನು ಹಲವು ಬಾರಿ ಭೇಟಿ ಮಾಡಿ ಚರ್ಚಿಸಿತ್ತು ಎಂದು ಅವರು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಅವರು, ಯುಕೊ ಸಂಘಟನೆಯ ಮೂಲಕ ಮೊದಲಿಗೆ ಕೊಡವ ಅಭಿವೃದ್ಧಿ ನಿಗಮದ ಅರಿವಾಯಿತು. ಆ ನಂತರ ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು, ಅದರಂತೆ ಇದೀಗ ಕೊಡವ ಅಭಿವೃದ್ಧಿ ನಿಗಮ ಸ್ಥಪಿಸುವ ಕುರಿತ ನನ್ನ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಹೇಳಿದರು. ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಲು ಒಪ್ಪಿಗೆ ನೀಡಿದರು. ಇದೀಗ ಕೊಡವ ಅಭಿವೃದ್ಧಿ ನಿಗಮವು ಕಂಪೆನಿ ಕಾಯ್ದೆಯನುಸಾರ ನೋಂದಣಿಯಾಗಿದ್ದು, ಶೀಘ್ರದಲ್ಲೇ ಸೂಕ್ತ ಅನುದಾನ ಮೀಸಲಿಟ್ಟು ಆಡಳಿತ ಮಂಡಳಿ ರಚನಾ ಪ್ರತ್ರೀಯೆಯೂ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾದ ತೇಲಪಂಡ ಸುಬ್ಬಯ್ಯ, ಕೊಲ್ಲೀರ ಉಮೇಶ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಅಪ್ಪಾರಂಡ ವೇಣು ಪೊನ್ನಪ್ಪ, ಕಳ್ಳಿಚಂಡ ರತನ್, ಅಳಮೇಂಗಡ ಮೋಟಯ್ಯ, ಪಳಂಗಿಯಂಡ ದರ್ಶನ್, ಚಂಗುಲಂಡ ಅಯ್ಯಪ್ಪ, ಜಮ್ಮಡ ಗಣೇಶ್, ತೀತಿರ ಕುಟ್ಟಪ್ಪ, ಮುಂಡಂಡ ಅರುಣ್, ಮುಕ್ಕಾಟಿರ ರಾಬಿನ್, ಚಂಗಂಡ ಸೂರಜ್, ನೆರ್ಪಂಡ ಪ್ರತೀಕ್ ಪೊನ್ನಣ್ಣ, ನೂರೆರ ಜೀವನ್,ಕೊಲ್ಲೀರ ಗಯಾ, ಕಾವಡಿಚಂಡ ದೀಪಕ್, ಕಾಟಿಮಾಡ ಗಿರಿ, ನೆಲ್ಲಮಕ್ಕಡ ಮಾದಯ್ಯ, ಮಚ್ಚಾಮಾಡ ರಮೇಶ್, ಅರುಣ್, ಬಾದುಮಂಡ ವಿಷ್ಣು, ಕಡೇಮಾಡ ತಿಮ್ಮಯ್ಯ, ಕೊಪ್ಪೀರ ದಿವಿನ್, ಕಾಯಪಂಡ ಬೋಪಣ್ಣ, ಮಾಣಿಪಂಡ ಅಯ್ಯಪ್ಪ, ಚೆಪ್ಪುಡಿರ ಪ್ರತಿಮ, ಕಳ್ಳಿಚಂಡ ದೀನ, ಬಳ್ಳಚೆಟ್ಟಿರ ಮೈನ, ಕುಂಜಿಲಂಡ ಗ್ರೇಸಿ, ಪಾಂಡಂಡ ಸ್ವಾತಿ, ಕಾವಡಿಚಂಡ ಪವಿತ್ರ ಹಾಗು ಇತರರು ಹಾಜರಿದ್ದರು. ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಸ್ವಾಗತಿಸಿದರು. ಚೆಪ್ಪುಡಿರ ಸುಜು ಕರುಂಬಯ್ಯ ವಂದಿಸಿದರು.









