ಮಡಿಕೇರಿ ಆ.14 : ಕಳೆದ ಮೂರು ತಿಂಗಳಲ್ಲಿ ಕಾಡಾನೆ ದಾಳಿಯಿಂದ 44 ಪ್ರಕರಣಗಳು ವರದಿಯಾಗಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರಪೇಟೆಯ ತಾ.ಪಂ.ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಾಡಾನೆ ಹಾವಳಿಯಿಂದ ಸಿದ್ದಾಪುರ ಬಳಿಯ ಅರೆಕಾಡು ಸಮೀಪದಲ್ಲಿ ಭಾನುವಾರ ಕೃಷಿಕನ ಮೇಲೆ ಕಾಡಾನೆ ದಾಳಿ ನಡೆಸಿದೆ. ಕಾಡಾನೆಗಳನ್ನು ಕಾಡು ಪ್ರದೇಶಕ್ಕೆ ಓಡಿಸುವ ಸಂದರ್ಭದಲ್ಲಿ ಸ್ಥಳೀಯರಿಗೆ ಮಾಹಿತಿ ನೀಡಬೇಕು. ಮುಂಚಿತವಾಗಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ತಂತಿ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಹೀಗೆ ಹಲವು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.
ವಿಷಯ ಪ್ರಸ್ತಾಪಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕಾಡಾನೆಗಳನ್ನು ಓಡಿಸುವ ಬಗ್ಗೆ ಸ್ಥಳೀಯರಿಗೆ ಮೊದಲೇ ಮಾಹಿತಿ ನೀಡಬೇಕು. ಅರಣ್ಯ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮನುಷ್ಯನ ಜೀವಕ್ಕೆ ಬೆಲೆಕೊಡಬೇಕು. ಕಾಡಾನೆ ಹಾವಳಿಗೆ ತುತ್ತಾದ ಕುಟುಂಬಗಳಿಗೆ ತಕ್ಷಣವೇ ಪರಿಹಾರ ವಿತರಿಸಬೇಕು ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರು ಕಳೆದ ಒಂದು ವರ್ಷದಿಂದ ಪರಿಹಾರ ನೀಡಲು 70 ಲಕ್ಷ ರೂ. ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಕಾಲಮಿತಿಯಲ್ಲಿ ತಲುಪಿಸಬೇಕು. 94 ಸಿ ಅಡಿ 955 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಆದ್ಯತೆ ಮೇಲೆ ಪರಿಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಸೋಮವಾರಪೇಟೆ ತಾಲ್ಲೂಕಿನಲ್ಲಿ 94ಸಿ ಸಂಬಂಧಿಸಿದಂತೆ 15 ವರ್ಷಗಳಿಂದ ಅರ್ಜಿಗಳ ವಿಲೇವಾರಿಗೆ ಬಾಕಿ ಇದೆ. ಸಕಾಲದಲ್ಲಿ ಅರ್ಜಿ ಇತ್ಯರ್ಥಪಡಿಸಬೇಕು ಎಂದು ಡಾ.ಮಂತರ್ ಗೌಡ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಎಷ್ಟು ಅರ್ಜಿಗಳು ಬಾಕಿ ಇವೆ ಎಂಬುದನ್ನು ಪಟ್ಟಿ ಮಾಡಿ ಅರ್ಹರಿಗೆ ಹಕ್ಕುಪತ್ರ ನೀಡಬೇಕು. ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಹಿಂಬರಹವನ್ನಾದರೂ ನೀಡಿ ಬಗೆಹರಿಸಬೇಕು ಎಂದರು.
ಸರ್ಕಾರದ ನಿರ್ದೇಶನದಂತೆ 94ಸಿ, 94ಸಿಸಿ ಅಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್.ನರಗುಂದ ಅವರು ನಮೂನೆ 50, 53 ಅರ್ಜಿಗಳನ್ನು ವಿಲೇವಾರಿ ಮಾಡಿದ ನಂತರ ನಮೂನೆ 57 ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.
94ಸಿ, 94ಸಿಸಿ ರಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಮಾಹಿತಿ ನೀಡಿದರು.
ಪಡಿತರ ಚೀಟಿ ಸಂಬಂಧಿಸಿದಂತೆ ಆಧಾರ್ ಲಿಂಕ್ ಮಾಡಬೇಕು. ಈ ಸಂಬಂಧ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಆಗಸ್ಟ್ ಅಂತ್ಯದೊಳಗೆ 3 ಸಾವಿರ ಕುಟುಂಬಗಳಿಗೆ ಆಧಾರ್‍ಗೆ ಕೆವೈಸಿ ಲಿಂಕ್ ಆಗಬೇಕಿದೆ. ಈ ಸಂಬಂಧ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಬೇಕು. ದೂರು ಬರದಂತೆ ವಿಶೇಷ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್.ಭೋಸರಾಜು, ಸಾಮಾನ್ಯ ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ಬಡವರ ಬಗ್ಗೆ ಕಾಳಜಿ ಇರಬೇಕು. ಶಿಕ್ಷಣ ಮತ್ತು ಆರೋಗ್ಯ ಜೊತೆಗೆ ಕಂದಾಯ ಇಲಾಖೆ ಕಾರ್ಯಕ್ರಮಗಳು ಅರ್ಹ ಬಡ ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಮತ್ತು ತಾ.ಪಂ.ಇಒಗಳಿಗೆ ಸ್ಥಳೀಯ ಸಮಸ್ಯೆಗಳು ಹತ್ತಿರದಲ್ಲಿ ತಿಳಿಯಲಿವೆ. ಆ ನಿಟ್ಟಿನಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಹೇಳಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಬೇಕು. ಬಳಗುಂದ ಗ್ರಾಮದಲ್ಲಿ ಕುಡಿಯುವ ನೀರು ಚೆನ್ನಾಗಿಲ್ಲ ಎಂಬ ಬಗ್ಗೆ ದೂರುಗಳು ಬಂದಿದ್ದು, ಪೈಪು ಒಡೆದಿದೆಯೋ ಏನು ಎಂಬುದನ್ನು ತಕ್ಷಣವೇ ಪರಿಶೀಲಿಸಿ ಸರಿಪಡಿಸುವಂತೆ ಸಂಬಂಧಪಟ್ಟ ಎಂಜನಿಯರ್ ಗಳಿಗೆ ಸೂಚಿಸಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಎಂಜಿನಿಯರ್‍ಗಳು, ತಾ.ಪಂ.ಇಒ ಮತ್ತು ಪಿಡಿಒಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಜಲಜೀವನ್ ಮಿಷನ್ ಯೋಜನೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಕೈಗೊಳ್ಳಲಾಗುವುದು. ಕೊಡಗು ಜಿಲ್ಲೆಯಿಂದ 10 ಮಂದಿ ಪಿಡಿಒಗಳು ವರ್ಗಾವಣೆಗೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ತಾ.ಪಂ.ಇಒ ಜಯಣ್ಣ ಅವರು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ ಒಟ್ಟು 39 ಗ್ರಾ.ಪಂ.ಗಳು ಇದ್ದು, 32 ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಜುಲೈ ಕೊನೆ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಶಾಂತಳ್ಳಿ, ಸೂರ್ಲಬ್ಬಿ, ಗರ್ವಾಲೆ ಮತ್ತಿತರ ಕಡೆಗಳಲ್ಲಿ ಕಾಫಿ ಮತ್ತಿತರ ಬೆಳೆಗೆ ಹಾನಿಯಾಗಿದ್ದು, ನಿಖರ ವರದಿ ನೀಡುವಂತೆ ಶಾಸಕರು ಸೂಚಿಸಿದರು.
ಕೃಷಿ ಜೊತೆಗೆ ಮೀನು ಕೃಷಿಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಡಾ.ಮಂತರ್ ಗೌಡ ಸಲಹೆ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಧ್ಯಾಹ್ನದ ವೇಳೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಬಿಸಿ ಊಟವನ್ನು ನೀಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲಿಸುವಂತೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಅವರು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ 47 ವಿದ್ಯಾರ್ಥಿಗಳು ಶಾಲೆಯಿಂದ ಹೊರಗಿದ್ದಾರೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಗಿದೆ ಎಂದು ತಿಳಿಸಿದರು.
ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗಬೇಕು. ಗುಣಮಟ್ಟದ ಮೊಟ್ಟೆ ಪೂರೈಸಬೇಕು. ಮಕ್ಕಳ ಹಾಜರಾತಿಯನ್ನು ನಿಖರವಾಗಿ ಬರೆಯಬೇಕು ಎಂದು ನಿರ್ದೇಶನ ನೀಡಿದರು.
ಬಡವರ ಮಕ್ಕಳಿಗೆ ನೀಡುವ ಕಾರ್ಯಕ್ರಮದಲ್ಲಿ ಮೋಸ ಮಾಡಬಾರದು. ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಸ್ಥಿತಿ ತಿಳಿದುಕೊಳ್ಳಬೇಕು. ತಪ್ಪು ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ಗಳು ಮಳೆಯಿಂದ ರಸ್ತೆ, ಸೇತುವೆಗಳು ಹಾನಿಯಾಗಿದ್ದಲ್ಲಿ ಮಾಹಿತಿ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಆದ್ಯತೆ ಮೇಲೆ ಗ್ರಾಮೀಣ ರಸ್ತೆಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್ ಅವರು ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, 5 ಮಂದಿ ಈಗಾಗಲೇ ವರ್ಗಾವಣೆ ಆಗಿದ್ದಾರೆ ಎಂದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ಮುಂದೆ ಬರುತ್ತಿಲ್ಲ ಎಂದರು.
ಪಶುಪಾಲನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆ ಕಾರ್ಯಕ್ರಮಗಳನ್ನು ಬಡ ಜನರಿಗೆ ತಲುಪಿಸುವಂತೆ ಬಡ ಜನರಿಗೆ ತಲುಪಿಸುವಂತೆ ಡಾ.ಮಂತರ್ ಗೌಡ ಅವರು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.