ಮಡಿಕೇರಿ ಆ.14 : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ..ಎಂ.ಕಾರ್ಯಪ್ಪ ಸಭಾಂಗಣದಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘ, ಎನ್‍ಎಸ್‍ಎಸ್, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಚಟುವಟಿಕೆಗಳ ಸಮಾರಂಭಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎ.ಪಿ.ಧನಂಜಯ ಚಾಲನೆ ನೀಡಿದರು.
ಎಲ್ಲರಿಗೂ ಒಳಿತನ್ನು ಬಯಸುತ್ತಾ, ಹಿರಿಯರಿಗೆ ಗೌರವ ನೀಡುತ್ತಾ, ಗುರುಗಳಿಗೆ ನಮಿಸುತ್ತಾ ಸಂಪ್ರದಾಯಗಳೊಂದಿಗೆ ಬೆಳೆದವರು ನಮ್ಮ ಭಾರತದವರು. ಶೇ.60 ಯುವಶಕ್ತಿ ಭಾರತದಲ್ಲಿದೆ. ಮುಂದಿನ ಭಾರತದ ಭವಿಷ್ಯ ಸುಗಮವಾಗಿ- ಸಮೃದ್ಧಿಯಾಗಿರಬೇಕೆಂದರೆ ಯುವ ಜನತೆಯು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಭಾರತ ದೇಶವನ್ನು ಅಭಿವೃದ್ಧಿಪಥದೆಡೆಗೆ ಸಾಗಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ನಾಯಕತ್ವ ಗುಣ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ನುಡಿದರು.
ನಗರಸಭಾ ಸದಸ್ಯರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉತ್ತಮಗೊಳಿಸಲು ಇಂದಿನಿಂದಲೇ ಪ್ರಯತ್ನ ಪಡಬೇಕು. ಇಂದಿನ ಸಮಾಜದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವಂತಹ ಸನ್ನಿವೇಶಗಳನ್ನು ನಾವೀಗ ನೋಡುತ್ತಿದ್ದೇವೆ. ಅಂತಹದರಲ್ಲಿ ಈ ಕಾಲೇಜಿನಲ್ಲಿ ಹೇರಳ ವಿದ್ಯಾರ್ಥಿಗಳನ್ನು ನೋಡಿ ಸಂತೋಷವಾಗುತ್ತಿದೆ. ಇದಕ್ಕೆ ನಿಮ್ಮ ಪ್ರಾಧ್ಯಾಪಕರುಗಳೇ ಕಾರಣ. ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡಿ ಒಳ್ಳೆಯ ಒಡನಾಟವನ್ನು ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯಶಾಸ್ತ್ರದ ಉಪನ್ಯಾಸಕರು ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಎನ್.ಎಸ್.ಚಿದಾನಂದ ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ತಿಳಿಸುವುದು ಸ್ವಚ್ಛತೆ, ಶಿಸ್ತು, ಒಡನಾಟ ನಿರಂತರ ದೈನಂದಿನ ಚಟುವಟಿಕೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವರು. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಮಯಪಾಲನೆ, ಗೌರವ, ವಾಕ್ ಚಾತುರ್ಯ ಹಲವಾರು ವಿಷಯಗಳನ್ನು ಕಲಿಸಿಕೊಡುತ್ತದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಹಾಗೂ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನಲ್ಲಿ ಆಯ್ಕೆ ಆದ ವಿವಿಧ ಪದಾಧಿಕಾರಿಗಳಿಗೆ ಬ್ಯಾಡ್ಜ್ ನೀಡಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ನಗರಸಭಾ ಸದಸ್ಯರಾದ ಶ್ವೇತ ಪ್ರಶಾಂತ್, ಪ್ರಾಂಶುಪಾಲರಾದ ವಿಜಯ್, ಹಿಂದಿ ಉಪನ್ಯಾಸಕರುಗಳಾದ ವಿ.ರಾಜಸುಂದರಂ, ಜೀವಶಾಸ್ತ್ರ ಉಪನ್ಯಾಸಕರಾದ ರವಿಕುಮಾರ್, ಕಾಲೇಜಿನ ವಿದ್ಯಾರ್ಥಿಗಳು ಇತರರು ಇದ್ದರು. ಗೌರಿ ಕೆ.ಬಿ. ನಿರೂಪಿಸಿದರು.