ಮಡಿಕೇರಿ ಆ .14 : ಮಾನವನ ಅತ್ಯಂತ ಉತ್ತಮ ಜೀವನಕ್ಕೆ ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಕೈಗನ್ನಡಿ ಇದ್ದಂತೆ. ವಚನಗಳ ಸಾರವನ್ನು ಅನುಸರಿಸಿ ನಡೆದದ್ದೇ ಆದಲ್ಲಿ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನ ಉಪನ್ಯಾಸಕ ಕೆ.ಆರ್.ಮಂಜೇಶ್ ಹೇಳಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ” ಶಾಲಾ ಕಾಲೇಜುಗಳೆಡೆಗೆ ವಚನ ಸಾಹಿತ್ಯದ ನಡಿಗೆ ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರವಚನ ನೀಡಿದ ಅವರು, ಜಗತ್ತಿನ ಮತ್ತು ಮಾನವ ಕುಲದ ಕಲ್ಯಾಣಕ್ಕಾಗಿ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ದೇವರ ದಾಸಿಮಯ್ಯ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೋಳಿಗೆ ಮಾರಯ್ಯ ಸೇರಿದಂತೆ ಹಲವು ಜಾತಿಯ ಶರಣರು ರಚಿಸಿದ ವಚನಗಳು ಅಂದು ಬಹು ದೊಡ್ಡ ಚಳುವಳಿಯನ್ನೇ ಉಂಟುಮಾಡಿ ಅಂಧಕಾರದಲ್ಲಿದ್ದ ಜನರ ಬದುಕಿಗೆ ಬೆಳಕಾದವು.
ಹಾಗೆಯೇ ಸತ್ಯ ಶುದ್ಧ ಕಾಯಕದೊಂದಿಗೆ ಶರಣರು ಸುಸಂಸ್ಕ್ರತ ಸಮಾಜ ನಿರ್ಮಾಣದ ಬಗ್ಗೆ ನಡೆಸಿದ ಹೋರಾಟದ ಪರಿಯನ್ನು ಕೆ.ಆರ್. ಮಂಜೇಶ್ ವಚನಗಳ ಮೂಲಕ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸ್.ಟಿ.ಶ್ಯಾಂ ಮಾತನಾಡಿ, ಇಂದು ಸಮಾಜದಲ್ಲಿ ವ್ಯಾಧಿಯಾಗಿರುವ ಮೋಸ, ವಂಚನೆ, ಕಳ್ಳತನ, ದರೋಡೆಗಳಂತಹ ದುಷ್ಕ್ರತ್ಯಗಳನ್ನು ತಡೆಯಲು ವಚನ ಸಾಹಿತ್ಯದ ಅರಿವು ಹಾಗೂ ಹರವು (ಪ್ರಸಾರ ) ಅತೀ ಮುಖ್ಯವಾಗಿದೆ.
ಆ ತಿಳುವಳಿಕೆ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳ ಮನಮುಟ್ಟುವಂತೆ ಜಾಗೃತಿ ಮೂಡಿಸಬೇಕಿದೆ. ಅಂತಹ ಕೆಲಸ ವಚನ ಸಾಹಿತ್ಯ ವೇದಿಕೆಯಿಂದ ಆಗುತ್ತಿದೆ ಎಂದು ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ನುಡಿದಂತೆ ನಡೆದದ್ದರಿಂದ ಅಂದು ಕಲ್ಯಾಣ ರಾಜ್ಯ ನಿರ್ಮಾಣವಾಯಿತು.
ಹಾಗಾಗಿ ವಿದ್ಯಾರ್ಥಿ ಹಂತದಿಂದಲೇ ಪ್ರತಿಯೊಬ್ಬರು ಸತ್ಯ ಶುದ್ಧ ಕಾಯಕ ಹಾಗೂ ನಡೆ ನುಡಿಯಲ್ಲಿ ಉತ್ತಮ ಸಂಸ್ಕಾರಗಳನ್ನು ಹೊಂದಲು ಕರೆಕೊಟ್ಟರು.
ವಚನ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.
ಶಿಕ್ಷಕ ಕೆ.ಆರ್.ರಮೇಶ್ ನಿರೂಪಿಸಿದರು. ಪಿಯು ಕಾಲೇಜು ಉಪನ್ಯಾಸಕ ಟಿ.ಶಿವಕುಮಾರ್ ಸ್ವಾಗತಿಸಿದರು.
ಸಂಗೀತ ಶಿಕ್ಷಕ ಪುಟ್ಟರಾಜು ವಂದಿಸಿದರು.
ವಿದ್ಯಾರ್ಥಿಗಳಿಂದ ಸಾಮೂಹಿಕವಾದ ವಚನಗಾಯನ ಕಾರ್ಯಕ್ರಮ ನಡೆಯಿತು.

