ಮಡಿಕೇರಿ ಆ.18 : ಯಾವುದೇ ಒಂದು ಒಳ್ಳೆಯ ಹವ್ಯಾಸವನ್ನು ಪ್ರೀತಿಯಿಂದ ಅಧ್ಯಯನ ಮಾಡಿದರೆ ಅದು ಜೀವ ಪೂರ್ತಿ ಮರೆಯಲು ಸಾಧ್ಯವಾಗುವುದಿಲ್ಲ. ಅದು ನಮಗೆ ನೀಡುವ ಜ್ಞಾನ ಮತ್ತು ಶಾಂತಿ, ಸಮಾಧಾನಗಳು ವರ್ಣನೆಗೆ ನಿಲುಕದ್ದು ಎಂದು ಖ್ಯಾತ ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್ ಹೇಳಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿತವಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಫೋಟೋ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಗ್ರಹಣ ಕೂಡ ಒಂದು ಅದ್ಭುತ ಹವ್ಯಾಸ. ಕ್ಯಾಮೆರಾ ಮುಂದೆ ಗಂಟೆಗಟ್ಟಲೆ ಕೂರುವುದು ಕೂಡ ಒಂದು ಹವ್ಯಾಸದಂತಾಗಿ ಹತ್ತು ಫೋಟೋಗಳಿಗೆ ಒಂದು ಫೋಟೋ ಚನ್ನಾಗಿ ಬಂದರೂ ಕೂಡ ಅದನ್ನು ಸಂಭ್ರಮಿಸುವವರು ನಮ್ಮ ನಡುವೆ ಇದ್ದು, ಅಂತಹವರಲ್ಲಿ ನಾನು ಕೂಡ ಒಬ್ಬ ಎಂದರು.
ಛಾಯಾಗ್ರಹಣ ಪಕ್ಷಿ ವೀಕ್ಷಣೆ, ಪ್ರಕೃತಿ ಮತ್ತು ಪರಿಸರ ಪ್ರೇಮ, ಖಗೋಳಶಾಸ್ತ್ರ ಇವೆಲ್ಲವನ್ನು ನಾನು ನನ್ನ ವೃತ್ತಿಯ ನಡುವೆ ಪ್ರೀತಿಯಿಂದ ಬೆಳೆಸಿಕೊಂಡ ಹವ್ಯಾಸಗಳಾದ ಹಿನ್ನೆಲೆಯಲ್ಲಿ ಈ ಹವ್ಯಾಸಗಳು ಹೆಸರು ಮನ್ನಣೆಗಳನ್ನು ಕೂಡ ತಂದುಕೊಟ್ಟಿದೆ ಎಂದರು.
ಆರಂಭಿಕ ಛಾಯಾಗ್ರಹಣ ಮತ್ತು ನಮ್ಮ ಕಾಲದಲ್ಲಿ ರೀಲ್ ಬಳಸಿ ಛಾಯಾಚಿತ್ರಗ್ರಹಣ ಕೆಲವೇ ವರ್ಷಗಳಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್ ಕ್ಯಾಮೆರಾ ಬಳಸಿ ಯಾವುದೇ ರೀತಿಯ ಛಾಯಾಚಿತ್ರವನ್ನು ಕೂಡ ಮಾಡಬಹುದು ಎಂದು ವಿಶ್ಲೇಷಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರುಳೀಧರ್ ಮಾತನಾಡಿ, ಪತ್ರಿಕೋದ್ಯಮ ಹಾಗೂ ಛಾಯಾಚಿತ್ರಕ್ಕೆ ಅವಿನಾಭಾವ ಸಂಬಂಧ ಇದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂದು ಹೇಳಿದ ಅವರು, ಭಾವನೆ ಮತ್ತು ಸೂಕ್ಷ್ಮತೆ ಅರ್ಥ ಮಾಡಿಕೊಂಡು ಚಿತ್ರಗಳನ್ನು ತೆಗೆಯುವಂತೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮಂದಪ್ಪ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದು, ಹವ್ಯಾಸಗಳ ಮೂಲಕ ಅವುಗಳ ಅನಾವರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ಪ್ರಕೃತಿಯನ್ನು ವೀಕ್ಷಣೆ ಮಾಡುವುದು ಪಶು, ಪಕ್ಷಿ, ಪ್ರಾಣಿಗಳ ಬಗ್ಗೆ ತಿಳಿಯುವುದು ಒಂದು ಅಸಾಧಾರಣ ಹವ್ಯಾಸ ಮತ್ತು ವಿಜ್ಞಾನ ಕೂಡ ಆಗಿದೆ. ಪ್ರತಿಯೊಬ್ಬರು ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯೋಗ್ಯ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರಾದ ಎಂ.ಬಿ. ವಿನ್ಸೆಂಟ್, ಗುಡ್ಡೆಮನೆ ವಿಶು ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗದಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ 105 ಚಿತ್ರಗಳ ಬಗ್ಗೆ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ವಿವರಣೆ ನೀಡಿದರು.
ಪ್ರೌಢಶಾಲಾ ವಿಭಾಗದಲ್ಲಿ ಹರ್ಷಿತಾ ಪ್ರಥಮ, ಯಕ್ಷಿತಾ ದ್ವಿತೀಯ, ತೃಷಾ ತೃತೀಯ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಬಿ.ಪಿ. ಪುನಿತ್ ಪ್ರಥಮ, ತಶ್ರೀಫ್ ದ್ವಿತೀಯ, ಋಷಿಕೇಶ್ ಎಂ.ಆರ್. ತೃತಿಯ ಬಹುಮಾನ ಪಡೆದರು. ಬಿ.ಎಸ್. ಪುನಿತ್, ಸರಿತಾ, ಲಿಶ್ವಿನ್, ಕೀರ್ತನಾ, ಇಂದುಶ್ರೀ, ಮೋಹನ್ ಸಮಾಧಾನಕರ ಬಹುಮಾನ ಗಳಿಸಿದರು.
ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ, ಶಾಲೆಯ ಹಳೆಯ ವಿದ್ಯಾರ್ಥಿ ಅನಿಲ್ ಎಚ್.ಟಿ ಕಾರ್ಯಕ್ರಮ ನಿರೂಪಿಸಿ, ವಿಘ್ನೇಶ್ ಭೂತನಕಾಡು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇವತಿ, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ಸಿ. ದಿನೇಶ್, ಸಂಘದ ತಾಲೂಕು ಹಾಗೂ ಜಿಲ್ಲೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.








