ಮಡಿಕೇರಿ ಆ.18 : ಮಾದಕ ವಸ್ತುಗಳಾದ ಎಂಡಿಎಂಎ ಮತ್ತು ಕೊಕೇನ್ ಸಹಿತ ಕೇರಳ ಮೂಲದ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಪೋಕ್ಲು ಪೊಲೀಸ್ ಠಾಣೆ ಸರಹದ್ದಿನ ಬಲಮುರಿ-ಮೂರ್ನಾಡು ರಸ್ತೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ಮಾಡಿದ ಪೊಲೀಸರು ಕೇರಳ ರಾಜ್ಯ ಮೂಲದ ರವೀಶ್ ಕುಮಾರ್ (26) ಮಹಮ್ಮದ್ ನಾಸಿರ್ (27) ಹಾಗೂ ಜೀಷ್ಣು ಮುರುಳಿ (23) ಎಂಬುವವರನ್ನು ಮಾಲು ಸಹಿತ ಬಂಧಿಸಿದರು.
ಆರೋಪಿಗಳ ಬಳಿಯಿಂದ 24.61 ಗ್ರಾಂ ಎಂಡಿಎಂಎ ಮತ್ತು 3.45 ಗ್ರಾಂ ಕೊಕೇನ್ ನನ್ನು ವಶಕ್ಕೆ ಪಡೆಯಲಾಗಿದೆ.
ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಎಂ.ಜಗದೀಶ್, ಮಡಿಕೇರಿ ಗ್ರಾಮಾಂತರ ಠಾಣಾ ಸಿಪಿಐ ಅನೂಪ್ ಮಾದಪ್ಪ, ಪಿಎಸ್‌ಐ ಈ.ಮಂಜುನಾಥ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಪೊಲೀಸರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.










