ಮಡಿಕೇರಿ ಆ.19 : ಮಣಿಪುರದ ಜನಾಂಗೀಯ ಗಲಭೆಗಳು ತಾರಕಕ್ಕೆ ಏರಲು ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪ್ರಜ್ಞ ಕಾವೇರಿ ಆಶ್ರಯದಲ್ಲಿ ನಡೆದ ‘ಉರಿಯುತ್ತಿದೆ ಮಣಿಪುರ ಏನಿದಕ್ಕೆ ಪರಿಹಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾತಿ ಹೆಸರನ್ನು ಬಳಸಿ ದೇಶ ವಿಭಜನೆ ಆಗುವ ರೀತಿಯ ಜಾತಿವಾರು ವರದಿ ಹೊರ ಬಿದ್ದ ಬೆನ್ನಲ್ಲೇ ಮಣಿಪುರದಲ್ಲಿ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ.
ಪ್ರಯೋಗ ಶಾಲೆಯನ್ನಾಗಿ ಮಣಿಪುರವನ್ನು ಬಳಸುವ ಪಯತ್ನ ಕೆಲವರಿಂದ ನಡೆದಿದ್ದು, ಇದೇ ರೀತಿ ಮುಂದಿವರೆದಲ್ಲಿ ದೇಶ ವಿವಿಧೆಡೆ ಅಂತಹ ಘಟನೆಗಳು ಮರುಕಳಿಸುವ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಮಣಿಪುರದಲ್ಲಿ ಮತ್ತೆ ಗಲಭೆ ಸಂಭವಿಸದಂತೆ ಕಾರ್ಯಯೋಜನೆ ರೂಪಿಸುತ್ತಿದೆ. ಆದರೆ, ಮಣಿಪುರದ ಗಡಿಭಾಗದ ದೇಶಗಳ ಜೊತೆ ಕೇಂದ್ರ ಸರ್ಕಾರ ಚರ್ಚಿಸಿ ನುಸುಳುಕೋರರು ಗಡಿಭಾಗದಿಂದ ನುಗ್ಗಿ ಗಲಭೆ ನಡೆಸದಂತೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಮಣಿಪುರದ ಪ್ರಮುಖರಾದ ಮೋತಿಮಾಲ ಗ್ಯಾಂಗಮ್ ಮಾತನಾಡಿ, ಮಣಿಪುರದ ಪ್ರಸಕ್ತ ಪರಿಸ್ಥಿಯನ್ನು ಅವಲೋಕಿಸಿ ಮಾತನಾಡಿದರು.
ಪ್ರಜ್ಞ ಕಾವೇರಿ ಅಧ್ಯಕ್ಷರಾದ ಮಡಿಕೇರಿಯ ಜಿ.ಟಿ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ.ಉಮ್ಮಿ ಮಾಯಿಬಾನೆ ಉಪಸ್ಥಿತರಿದ್ದರು.








