ಸೋಮವಾರಪೇಟೆ ಆ.22 : ಸಣ್ಣ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡದಿದ್ದರೆ, ಹೋರಾಟ ರೂಪಿಸಲಾಗುವುದು ಎಂದು ರಾಜ್ಯ ರೈತಸಂಘ ಎಚ್ಚರಿಕೆ ನೀಡಿದೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಕಾಫಿ ಬೆಳೆಗಾರರ 10 ಎಚ್.ಪಿ.ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವುದನ್ನು ಸರ್ಕಾರ ತಕ್ಷಣವೇ ಕಾನೂನುಬದ್ಧಗೊಳಿಸಬೇಕು. ರೈತಸಂಘದಿಂದ ನಿರಂತರ ಪ್ರತಿಭಟನೆಯ ಹಿನ್ನೆಲೆ ಹಿಂದಿನ ಬಿಜೆಪಿ ಸರ್ಕಾರ ಕೆಲವು ಮಾನದಂಡಗಳನ್ನು ರೂಪಿಸಿ ಉಚಿತ ವಿದ್ಯುತ್ ನೀಡಲು ಮುಂದಾಗಿತ್ತು. ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಕಳೆದ ಅಧಿವೇಶನದಲ್ಲಿ ಉಚಿತ ವಿದ್ಯುತ್ ನೀಡುವ ಬಗ್ಗೆ ಚರ್ಚೆಯೇ ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿರಾಜಪೇಟೆ ಶಾಸಕರ ಚುನಾವಣಾ ಪ್ರಣಾಳಿಕೆಯಲ್ಲೂ ಉಚಿತ ವಿದ್ಯುತ್ ನೀಡುವ ಭರವಸೆ ನೀಡಲಾಗಿತ್ತು. ಆದರೆ ಯಾವ ಶಾಸಕರು ಅಧಿವೇಶನದಲ್ಲಿ ಕಾಫಿ ಬೆಳೆಗಾರರ ಪರ ಮಾತನಾಡಿಲ್ಲ. ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗುತ್ತಿದ್ದು, ಕಾಫಿ ತೋಟಗಳು ರೋಗಪೀಡಿತವಾಗಿವೆ. ಬೆಳೆಗಾರರು ಸಾಲಗಾರರಾಗಿದ್ದಾರೆ. ನಿಗದಿತ ಸಮಯದಲ್ಲಿ ಹೂ ಮಳೆ ಬೀಳುತ್ತಿಲ್ಲ. ರಾಜ್ಯದಲ್ಲಿ ಎಲ್ಲಾ ಬೆಳೆಗಳಿಗೆ ನೀಡುವಂತೆ ಕಾಫಿಗೂ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.
ಕಾಫಿ ಬೆಳೆಯುವ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಒಟ್ಟಿಗೆ ಚರ್ಚೆ ನಡೆಸಿ, ಹೋರಾಟ ಮಾಡಿಯಾದರೂ ಸಣ್ಣ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಸಕ್ತ ವರ್ಷ ಮುಂಗಾರು ವಿಳಂಬ ಹಾಗೂ ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾಫಿ, ಕಾಳುಮೆಣಸು ಫಸಲಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಕೂಡಲೆ ಸರ್ಕಾರ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಾಫಿ ಮಂಡಳಿಯವರು ಮಳೆ ಸುರಿಯುವ ಸಂದರ್ಭ ಸಮೀಕ್ಷೆ ನಡೆಸಿ, ಬೆಳೆಹಾನಿ ವರದಿ ಸಲ್ಲಿಸಬೇಕು. ಆದರೆ ಮಳೆನಿಂತ ಮೇಲೆ ಸಮೀಕ್ಷೆ ಮಾಡಿದರೆ ಪ್ರಯೋಜನವಿಲ್ಲ. ಸರ್ಕಾರ ಕಾಫಿ ಬೆಳೆಗಾರರಿಗೆ ಸೌಲಭ್ಯ ಒದಗಿಸದಿದ್ದರೆ, ಉತ್ಪಾದನೆ ಕಡಿಮೆಯಾಗಿ ಸಾವಿರ ಕೋಟಿ ಲೆಕ್ಕದಲ್ಲಿ ವಿದೇಶಿ ವಿನಿಯಮ ಮತ್ತು ತೆರಿಗೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಉತ್ಪಾದನೆ ಹೆಚ್ಚಿಸುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಸರ್ಕಾರ ಬದಲಾಗಿದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಮತು ಮನಸ್ಥಿತಿ ಬದಲಾಗಿಲ್ಲ. ಕಂದಾಯ ಇಲಾಖೆಯಲ್ಲಿ ರೈತರ ಶೋಷಣೆ ಮುಂದುವರಿದಿದೆ. ನಿಗದಿತ ಸಮಯದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಹದ್ದುಬಸ್ತಿನಲ್ಲಿ ಇಲ್ಲ. ಭ್ರಷ್ಠಾಚಾರ ಮಿತಿಮೀರಿದೆ. ಬ್ರೋಕರ್ಗಳ ಮೂಲಕ ಕಂದಾಯ ಇಲಾಖೆ ನಡೆಯುತ್ತಿದೆ. ರೈತರ ದುರಸ್ತಿ ಫೈಲ್ಗಳು ಧೂಳು ತಿನ್ನುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಪ್ರತಿಹಳ್ಳಿಗಳಿಗೆ ಬಸ್ಸಿನ ಸೌಕರ್ಯವಿಲ್ಲ. ಬಡವರು, ಪರಿಶಿಷ್ಠಜಾತಿ ಮತ್ತು ಪಂಗಡದವರು ನಾಲ್ಕು ಚಕ್ರದ ಸೆಕೆಂಡ್ಹ್ಯಾಂಡ್ ವಾಹನಗಳನ್ನು ಖರೀದಿಸಿದ್ದಾರೆ. ಅದು ಅನಿವಾರ್ಯವೂ ಆಗಿದೆ. ಆದರೆ ನಾಲ್ಕು ಚಕ್ರ ವಾಹನ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ತೆಗೆಯುತ್ತೇಅವೆ ಎಂದು ಸರ್ಕಾರ ಹೇಳುವುದು ಅಮಾನವೀಯವಾಗಿದೆ. ಬಡವರ ಶಾಪಕ್ಕೆ ಸರ್ಕಾರ ಗುರಿಯಾಗಬೇಕಾಗುತ್ತದೆ ಎಂದು ರೈತ ಸಂಘದ ಸಂಚಾಲಕ ತಲ್ತಾರೆ ರಾಜಪ್ಪ ಹೇಳಿದರು.
ಕಂದಾಯ ಇಲಾಖೆಯಲ್ಲಿ ಒಂದು ಆರ್ಟಿಸಿಗೆ 25 ರೂ. ವಸೂಲಿ ಮಾಡುತ್ತಿದ್ದಾರೆ. ಎಲ್ಲಾ ಸೇರಿ ಒಂದು ಆರ್ಟಿಸಿ ವಿತರಿಸಲು 2 ರೂ. ಖರ್ಚಾಗುತ್ತದೆ. 10 ರೂ.ಗಳಿಗೆ ಆರ್ಟಿಸಿಗೆ ವಿತರಿಸಬೇಕೆಂದು ಸಂಚಾಲಕ ಲಕ್ಷ್ಮಣ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಚೇತನ್, ಉಪಾಧ್ಯಕ್ಷ ಮಚ್ಚಂಡ ಆಶೋಕ್ ಇದ್ದರು.