ಮಡಿಕೇರಿ, NEWS DESK ಸೆ.26: ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಮಹಮ್ಮದ್ ಅವರ ಸರಳ ಜೀವನ ಸಮಾಜಕ್ಕೆ ಆದರ್ಶವಾಗಬೇಕು. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸುತ್ತಾ ಇತರ ಧರ್ಮಗಳನ್ನು ಗೌರವಿಸಬೇಕು ಎಂದು ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಹೇಳಿದರು.
ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ‘ಪ್ರವಾದಿ-ಮಾನವ ಕುಲಕ್ಕೆ ನೀಡಿದ ಕೊಡುಗೆಗಳು’ ಎಂಬ ವಿಷಯದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮ್ಮ ಧರ್ಮವನ್ನು ಪ್ರೀತಿಸುತ್ತಾ ಇತರ ಧರ್ಮಗಳಿಗೆ ಗೌರವ ಸೂಚಿಸುವುದೇ ನಿಜವಾದ ಮಾನವತಾವಾದ. ವ್ಯವಸ್ಥೆ ಸರಿಯಿಲ್ಲ ಎಂದು ದೂಷಿಸುವ ಬದಲು ವ್ಯವಸ್ಥೆಯೊಳಗೆ ಪ್ರವೇಶಿಸಿ ಅದನ್ನು ಸರಿಪಡಿಸುವ ಪ್ರಯತ್ನ ನಡೆಯಬೇಕು. ತಪ್ಪು ಕಲ್ಪನೆಗಳನ್ನು ಬದಿಗೊತ್ತಿ ವಿಶಾಲ ಮನೋಭಾವದಿಂದ ಅಧ್ಯಯನ ನಡೆಸಿದಾಗ ಸತ್ಯವನ್ನು ಅರಿಯಲು ಸಾಧ್ಯವಾಗುತ್ತದೆ. ಪ್ರವಾದಿ ಮಹಮ್ಮದ್ ಅವರು ಅತ್ಯಂತ ಸರಳ ಜೀವನ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ರಫೀಕ್ ಮಾಸ್ಟರ್ ಹೇಳಿದರು.
ಕೊಡಗು ಉಮ್ಮತ್ ಒನ್ ಸಂಸ್ಥೆಯು ಶಿಕ್ಷಣ, ಸಾಹಿತ್ಯ ಹಾಗೂ ಕೌಶಲ್ಯಾಭಿವೃದ್ಧಿ ಸೇರಿದಂತೆ ಸಮಾಜದಲ್ಲಿ ಶಾಂತಿಯ ಸೇತುವೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಂತಹ ಸಮಾಜಮುಖಿ ಕಾರ್ಯಗಳು ಮತ್ತಷ್ಟು ನಡೆಯಬೇಕು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ ಮಾತನಾಡಿ, ಕಳೆದ ಆರು ವರ್ಷಗಳ ಹಿಂದೆ ಆರಂಭಗೊಂಡ ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಸಂಸ್ಥೆಯು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದು, ಮುಂದೆಯೂ ಮತ್ತಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಲಿ ಎಂದು ಹಾರೈಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಖಾಲೀದ್ ಹಾಜಿ ಮಾತನಾಡಿ, ಈದ್ ಮಿಲಾದ್ ಪ್ರಯುಕ್ತ ಸರ್ವ ಧರ್ಮೀಯರಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ. 300ಕ್ಕೂ ಅಧಿಕ ಕೈಬರಹದ ಪ್ರಬಂಧಗಳು ಸಲ್ಲಿಕೆಯಾಗಿದ್ದು, ಪಾರದರ್ಶಕವಾಗಿ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಬದುಕನ್ನು ಅರಿಯುವ ಕೆಲಸ ನಿರಂತರವಾಗಬೇಕು. ಮೊಬೈಲ್ ಯುಗದಲ್ಲಿ ಬರವಣಿಗೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನರಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಕಾರ್ಯ ಮುಂದೆಯೂ ನಿರಂತರವಾಗಿ ನಡೆಯಲಿದೆ ಎಂದರು.
ಬಹುಮಾನ ವಿತರಣೆ
‘ಪ್ರವಾದಿ-ಮಾನವ ಕುಲಕ್ಕೆ ನೀಡಿದ ಕೊಡುಗೆಗಳು’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು.
ವಿಜೇತರು:
- ಪ್ರಥಮ ಬಹುಮಾನ – ₹15,000: ಮೈಮೂನಾ ಟಿ.ಎ., ಕಡಂಗ ಮರೂರು ಗ್ರಾಮ
- ದ್ವಿತೀಯ ಬಹುಮಾನ – ₹10,000: ಅಖೀಲಾ ಪರ್ವೀನ್, ಸಂಪಿಗೆಕಟ್ಟೆ ರಸ್ತೆ, ಮಡಿಕೇರಿ
- ತೃತೀಯ ಬಹುಮಾನ – ₹5,000: ಚಂದ್ರ ಶೆಟ್ಟಿ ಬಿ.ಟಿ., ಬಾಪೂಜಿ ಬಡಾವಣೆ, ಕುಶಾಲನಗರ; ಆಯಿಷಾ ಎಸ್.ಎಸ್., ಕರ್ಕಳ್ಳಿ, ಸೋಮವಾರಪೇಟೆ
- ಸಮಾಧಾನಕರ ಬಹುಮಾನ: ಸಿಯಾಬುದ್ದೀನ್ ಕೆ.ಹೆಚ್., ಹಾಕತ್ತೂರು; ಶಶಿಕಲಾ ಕೆ., ಕಗ್ಗೋಡ್ಲು ಗ್ರಾಮ; ಫಾತಿಮತ್ ರಂಸೀನಾ, ನೆಲ್ಲಿಹುದಿಕೇರಿ.
ಕಾರ್ಯಕ್ರಮದಲ್ಲಿ ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಸಲಹೆಗಾರ ನಿಜಾಮುದ್ದೀನ್ ಸಿದ್ದಿಕ್, ಸಂಸ್ಥೆಯ ಅಧ್ಯಕ್ಷ ಬಶೀರ್, ಉದ್ಯಮಿಗಳು ಹಾಗೂ ದಾನಿಗಳಾದ ಸಿದ್ದಿಕ್ ಹಂಸ, ಹಸೈನಾರ್ ಹಾಜಿ, ಮಜೀದ್ ಹಾಜಿ, ಕೆ.ಯು. ಯೂಸೂಫ್ ಸೇರಿದಂತೆ ಟ್ರಸ್ಟ್‌ನ ಪ್ರಮುಖರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.







