ನಾಪೋಕ್ಲು, NEWS DESK ಸೆ.26: ಕಿರುಂದಾಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 36 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ದೇವಮಾಜಿ ಹಾಗೂ ಕಿರುಂದಾಡು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಭೋಜಮ್ಮ ಅವರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಗ್ರಾಮದ ಭಗವತಿ ಶ್ರೀ ಶಕ್ತಿ ಸಂಘ, ಆದಿಶಕ್ತಿ ಸ್ವಸಹಾಯ ಸಂಘ ಹಾಗೂ ವಿಷ್ಣು ಸ್ವಸಹಾಯ ಸಂಘಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ಸಮಾರಂಭದ ಜೊತೆಗೆ ಪೋಷಣ್ ಮಾಸಾಚರಣೆ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾನುಮತಿ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚೆಯ್ಯಂಡಾಣೆ ವೃತ್ತದ ಮೇಲ್ವಿಚಾರಕಿ ಶೀಲಾ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಚಾರ ಕಾರ್ಯಕರ್ತೆ ಹೇಮಾವತಿ, ಆಶಾ ಕಾರ್ಯಕರ್ತೆ ಹರಿಣಿ ಹಾಗೂ ಶಾಲಾ ಶಿಕ್ಷಕಿ ರೋಹಿಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ರಾಧಾಮಣಿ ಸ್ವಾಗತಿಸಿದರು. ತಾರಾ ಪ್ರಾರ್ಥಿಸಿದರು. ಬಳಿಕ ವಂದನಾರ್ಪಣೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ನಿವೃತ್ತರಾದ ದೇವಮಾಜಿ ಹಾಗೂ ಭೋಜಮ್ಮ ಅವರ ಸುದೀರ್ಘ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.








